ಮಂಗಳೂರು: "ಕರ್ನಾಟಕ ಸರ್ಕಾರ ಮಂಗಳೂರು ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಲು ಸಿದ್ಧತೆಯಲ್ಲಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
"ಈ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಉತ್ತಮ ಮೂಲಸೌಲಭ್ಯ, ಆರಾಮದಾಯಕ ವಾಸಸ್ಥಳ ಮತ್ತು ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಈ ಟೌನ್ ಶಿಫ್ ಯೋಜನೆ ಅತ್ಯಾಧುನಿಕ ಮೂಲಸೌಲಭ್ಯಗಳೊಂದಿಗೆ ವಾಣಿಜ್ಯ ಕೇಂದ್ರಗಳು, ಶಿಕ್ಷಣ ಮತ್ತು ಆರೋಗ್ಯ ಸೇವೆಗಳು, ಉದ್ಯಾನಗಳು ಮತ್ತು ಪರಿಸರಸ್ನೇಹಿ ವಸತಿ ಸೌಲಭ್ಯಗಳನ್ನು ಒಳಗೊಂಡಿರುತ್ತವೆ" ಎಂದು ತಿಳಿಸಿದರು.
"ಸಮಗ್ರ ಟೌನ್ ಶಿಪ್ ಯೋಜನೆಯಲ್ಲಿ, ಹೊಸ ಉದ್ಯೋಗಾವಕಾಶಗಳನ್ನು ಹಾಗೂ ಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನಶೈಲಿಯನ್ನು ಉತ್ತೇಜಿಸಲು ನೆರವಾಗಲಿದೆ. ಯೋಜನೆಯು ದಕ್ಷಿಣ ಕನ್ನಡದ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುವ ನಿರೀಕ್ಷೆಯಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಸಂಪರ್ಕವನ್ನು ಒದಗಿಸುತ್ತದೆ. ಕರ್ನಾಟಕವು ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯ ಸರ್ಕಾರ ಎಲ್ಲಾ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ವಿಶೇಷವಾಗಿ ಶೆಡ್ಯೂಲ್ ಕಾಸ್ಟ್, ಶೆಡ್ಯೂಲ್ ಟ್ರೈಬ್, ಮಹಿಳೆಯರು, ರೈತರು, ಹಿರಿಯ ನಾಗರಿಕರು ಇತ್ಯಾದಿಗಳ ಕಲ್ಯಾಣಕ್ಕಾಗಿ ಸರ್ಕಾರವು ವಿಶೇಷ ಗಮನ ಹರಿಸುತ್ತಿದೆ" ಎಂದರು.