ಮಂಗಳೂರು:''ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 4.30 ಲಕ್ಷ ರೂ ಕೋಟಿ ತೆರಿಗೆ ಹೋಗುತ್ತಿದೆ. ಆದರೆ, ರಾಜ್ಯಕ್ಕೆ 52 ಸಾವಿರ ಕೋಟಿ ರೂ ಮಾತ್ರ ನೀಡುತ್ತಿದ್ದಾರೆ. ಈ ವಿಚಾರವನ್ನು ಹೇಳಿದರೆ ಬಿಜೆಪಿಯವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಶೇಕಡಾವಾರು ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಕುರಿತು ಬಿಜೆಪಿ ಅಂಕಿಅಂಶಗಳನ್ನು ನೀಡಲಿ'' ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸೆಸ್ ಮತ್ತು ಸರ್ಚಾರ್ಜ್ಗಳನ್ನು ತೆರಿಗೆ ಹಂಚಿಕೆಯಿಂದ ಹೊರಗಿಡಲಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ಸೆಸ್ ಮತ್ತು ಸರ್ಚಾರ್ಜ್ಗಳನ್ನು ಕಳೆದ ಕೆಲವು ವರ್ಷಗಳಿಂದ ಹೆಚ್ಚಿಸಿ ತನ್ನ ರಾಜಸ್ವ ಸಂಗ್ರಹಣೆಯನ್ನು ಏರಿಸಿಕೊಂಡಿದೆ. ಇದರಿಂದ ರಾಜ್ಯಕ್ಕೆ ಹಂಚಿಕೆಯಾಗುವ ತೆರಿಗೆ ಪಾಲು ಕಡಿಮೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ವಿಧಿಸುವ ಸೆಸ್ ಮತ್ತು ಸರ್ಚಾರ್ಜ್ಗಳಲ್ಲಿ ಶೇ.428ರಷ್ಟು ಹೆಚ್ಚಳವಾಗಿದೆ. ಕೇಂದ್ರದ ಆಯವ್ಯಯ ಗಾತ್ರ ಶೇ.195ರಷ್ಟು ಏರಿದೆ'' ಎಂದು ದೂರಿದರು.
''15ನೇ ಹಣಕಾಸು ಆಯೋಗವು ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಪನ್ಮೂಲ ಹಂಚಿಕೆಗೆ 2011ರ ಜನಗಣತಿಯನ್ನು ಪರಿಗಣಿಸಿರುವುದು ಸರಿಯೆಂದು ಬಿಜೆಪಿ ಹೇಳುತ್ತಿದೆ. ಆದರೆ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಿಸುವ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದವು. 1971ರಲ್ಲಿ ಕರ್ನಾಟಕದ ಜನಸಂಖ್ಯೆ ಬೆಳವಣಿಗೆ ದರ ಶೇ.24.22ಗಳಷ್ಟಿದ್ದು, ಇದು ಉತ್ತರಪ್ರದೇಶ ಮತ್ತು ಬಿಹಾರಕ್ಕಿಂತ ಹೆಚ್ಚು. 2011ರಲ್ಲಿ ರಾಜ್ಯದ ಬೆಳವಣಿಗೆ ದರ ಶೇ.15.61ಕ್ಕಿಳಿದರೆ, ಬಿಹಾರದ್ದು ಶೇ.25.42ಕ್ಕೆ ಏರಿಕೆಯಾಗಿದೆ. ಉತ್ತರಪ್ರದೇಶದ್ದು ಶೇ.20.23ಕ್ಕೆ ಏರಿಕೆಯಾಗಿದೆ. ಪ್ರಗತಿಪರ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಜನಸಂಖ್ಯೆಯನ್ನು ನಿಯಂತ್ರಿಸುತ್ತಿದೆ. ಆದರೆ, ಬಿಹಾರ, ಉತ್ತರ ಪ್ರದೇಶ, ಛತೀಸ್‌ಗಢ, ಜಾರ್ಖಂಡ್ ಮತ್ತು ರಾಜಸ್ಥಾನ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಿಸಲು ವಿಫಲವಾಗಿವೆ'' ಎಂದು ತಿಳಿಸಿದರು.