ಬೆಂಗಳೂರು: ಫುಟ್‌ಪಾತ್ ಮೇಲೆ ತಳ್ಳುವ ಗಾಡಿ ಹೊತ್ತಿ ಉರಿಯುವುದನ್ನು ತಪ್ಪಿಸಲು ಹೋದ ವ್ಯಕ್ತಿಯೊಬ್ಬ ಮೈ ಕೈ ಸುಟ್ಟುಕೊಂಡ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯ ಬೆಳ್ಳಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಮಾರ್ಚ್ 12 ರಂದು ನಡೆದಿರುವ ಘಟನೆಯಲ್ಲಿ ಶೇಕ್ ನವೀದ್ ಎಂಬಾತನಿಗೆ ಗಾಯಗಳಾಗಿದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಅವಘಡಕ್ಕೆ ಕಾರಣನಾದ ತಳ್ಳುವ ಗಾಡಿ ಮಾಲೀಕನ ವಿರುದ್ಧ ಬಾಗಲೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮಾರ್ಚ್ 12ರಂದು ಬೆಳಗ್ಗೆ 7.30ರ ಸುಮಾರಿಗೆ ಹೆಗಡೆ ನಗರದ ಕಡೆ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಶೇಕ್ ನವೀದ್, ಬೆಳ್ಳಹಳ್ಳಿ ಜಂಕ್ಷನ್ ಬಳಿ ಫುಟ್‌ಪಾತ್ ಮೇಲೆ ತಳ್ಳುವ ಗಾಡಿಯೊಂದು ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ್ದರು. ಈ ವೇಳೆ ಬೆಂಕಿ ಆರಿಸಲು ಮುಂದಾದಾಗ ತಳ್ಳುವ ಗಾಡಿ ಬಳಿಯಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ನವೀದ್ ಹಾಗೂ ಸುತ್ತಮುತ್ತ ಇದ್ದ ಅನೇಕರಿಗೆ ಸುಟ್ಟ ಗಾಯಗಳಾಗಿವೆ.