ಬೆಂಗಳೂರು:ಸರ್ಕಾರಿ ಪ್ರೌಢಶಾಲೆಯೊಂದರಲ್ಲಿನ ಅವ್ಯವಸ್ಥೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಎಕ್ಸ್ ಖಾತೆಗೆ ಟ್ಯಾಗ್ ಮಾಡಿ ಸಿಎಂ ಕಚೇರಿಯ ಗಮನ ಸೆಳೆದ ಪರಿಣಾಮ ತುರ್ತು ಕಾಮಗಾರಿ ಕೈಗೊಂಡು ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.
ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗಂಗನಾಳ ಗ್ರಾಮದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅವ್ಯವಸ್ಥೆ ಇತ್ತು. ಒಳಚರಂಡಿ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಮತ್ತು ನೀರು ಸರಬರಾಜಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಮಾತ್ರವಲ್ಲದೇ ದುರವಸ್ಥೆಯನ್ನು ಕಂಡು ಬೇಸತ್ತಿದ್ದ ಗ್ರಾಮಸ್ಥರು ಹಾಗೂ ಪೋಷಕರು ಶಾಲೆಗೆ ಬೀಗ ಜಡಿದಿದ್ದರು. ಹೆಣ್ಣುಮಕ್ಕಳಿಗೆ ಶೌಚಾಯವಿಲ್ಲದೇ ಇದ್ದರೆ ಹೇಗೆ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳಿಗೆ ಶಾಲಾ ಮುಖ್ಯಸ್ಥರು ಮುಖ್ಯಮಂತ್ರಿಗಳ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದರು.
ಇದು ಮುಖ್ಯಮಂತ್ರಿಗಳ ಕಚೇರಿಯ ಗಮನಕ್ಕೆ ಬಂದು ತಕ್ಷಣವೇ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಶಾಲೆಯ ದುರವಸ್ಥೆಯನ್ನು ಸರಿಪಡಿಸುವಂತೆ ದೂರವಾಣಿ ಮುಖಾಂತರ ಸೂಚಿಸಿದ್ದರು. ಕುಡಿಯುವ ನೀರು, ಬಿಸಿಯೂಟ ಮತ್ತು ಶೌಚಾಲಯಕ್ಕಾಗಿ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳುವಂತೆ ಸೂಚನೆ ನೀಡಿದ್ದರು.