ಕರ್ನಾಟಕ

karnataka

ETV Bharat / state

ಕರ್ನಾಟಕ ಸರ್ಕಾರದಿಂದ ಹಣದುಬ್ಬರ, ಸಾಲ ಹೆಚ್ಚಳದ ಜೊತೆಗೆ ಹೂಡಿಕೆದಾರರು ಹೊರಹೋಗುವಂತಾಗಿದೆ : ನಿರ್ಮಲಾ ಸೀತಾರಾಮನ್ - Nirmala outrage against state govt - NIRMALA OUTRAGE AGAINST STATE GOVT

''ಆರ್ಥಿಕವಾಗಿ ಆರೋಗ್ಯವಾಗಿದ್ದ ಕರ್ನಾಟಕವನ್ನು ಈಗಿನ ಸರ್ಕಾರ ಅಧಿಕ ಹಣದುಬ್ಬರ, ಸಾಲ ಜೊತೆಗೆ ಹೂಡಿಕೆದಾರರನ್ನು ಹೊರ ಹೋಗುವಂತೆ ಮಾಡಿದೆ'' ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದರು.

Nirmala Sitharaman  Bengaluru  Finance Minister Nirmala Sitharaman
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (IANS)

By ETV Bharat Karnataka Team

Published : Jul 28, 2024, 4:37 PM IST

ಬೆಂಗಳೂರು:''ಆರ್ಥಿಕವಾಗಿ ಸದೃಢವಾಗಿದ್ದ ಕರ್ನಾಟಕವನ್ನು ಕಾಂಗ್ರೆಸ್ ಆಡಳಿತದಿಂದಾಗಿ ಹೂಡಿಕೆದಾರರು ರಾಜ್ಯ ಬಿಟ್ಟು ಹೋಗುವಂತೆ ಮಾಡುತ್ತಿದೆ'' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಅವರು, ಎನ್​ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದ ಅನುದಾನದ ಬಗ್ಗೆ ಅಂಕಿಅಂಶ ನೀಡಿದರು. ಆ ಮೂಲಕ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದರು. ''ಕರ್ನಾಟಕಕ್ಕೆ ಬರುವ ಕೇಂದ್ರ ಅನುದಾನದ ಬಗ್ಗೆ ಸುಳ್ಳು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ. ಇದರಿಂದ ಯಾರಿಗೂ ಅನುಕೂಲ ಆಗಲ್ಲ'' ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕಕ್ಕೆ ಈ ವರ್ಷ 15,300 ಕೋಟಿ ರೂ‌. ಸಹಾಯ ಅನುದಾನ:2004-2014 ನಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ 81,791 ಕೋಟಿ ರೂ. ಮಾತ್ರ ಅನುದಾನ ಬಂದಿತ್ತು. ಅದೇ 2014- 2024 ಎನ್​ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ 2,95,818 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಕೇಂದ್ರ ಸಹಾಯ ಅನುದಾನ ರೂಪದಲ್ಲಿ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂ. ಹಣ ನೀಡಲಾಗಿತ್ತು. ಎನ್​ಡಿಎ ಅವಧಿಯಲ್ಲಿ 2,36,955 ಕೋಟಿ ರೂ. ನೀಡಲಾಗಿದೆ. ಅಂದರೆ, ಯುಪಿಎ ಅವಧಿಯಲ್ಲಿ ವಾರ್ಷಿಕ ಸರಾಸರಿ 6,077 ಕೋಟಿ ಮಾತ್ರ ಸಹಾಯ ಅನುದಾನ ಬರುತ್ತಿತ್ತು. ಈ ವರ್ಷ ಮೋದಿ ಸರ್ಕಾರ 15,300 ಕೋಟಿ ರೂ. ಸಹಾಯ ಅನುದಾನ ನೀಡಿದೆ ಎಂದು ಅಂಕಿಅಂಶದೊಂದಿಗೆ ವಿವರಣೆ ನೀಡಿದರು.

45,485 ಕೋಟಿ ರೂ. ತೆರಿಗೆ ಪಾಲು ಹಂಚಿಕೆ:''2024- 25ರಲ್ಲಿ ಕರ್ನಾಟಕಕ್ಕೆ ಕೇಂದ್ರದ ತೆರಿಗೆ ಪಾಲು 45,485 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ ವಾರ್ಷಿಕ ಸರಾಸರಿ 8,179 ಕೋಟಿ ರೂ. ಮಾತ್ರ ಸಿಗುತ್ತಿತ್ತು. ಇದನ್ನು ಹೋಲಿಕೆ ಮಾಡಲಾಗುತ್ತಾ? ಅಂಕಿಅಂಶ ನೋಡಿ. ಕಾಂಗ್ರೆಸ್ ಸರ್ಕಾರ ತಪ್ಪು ಪ್ರಚಾರ ಏಕೆ ಮಾಡುತ್ತಿದೆ'' ಎಂದು ಅವರು ಪ್ರಶ್ನಿಸಿದರು.

''2021ರಿಂದ ಮಾರ್ಚ್ 2024ರ ವರೆಗೆ ಕರ್ನಾಟಕಕ್ಕೆ 8,312 ಕೋಟಿ ರೂ. ಬಡ್ಡಿರಹಿತ 50 ವರ್ಷ ಅವಧಿಗೆ ಸಾಲ ನೀಡಿದ್ದೇವೆ. ಈ ವರ್ಷ 2006 ಕೋಟಿ ರೂ. ಯಾವುದೇ ಷರತ್ತು ಇಲ್ಲದೆ ಸಾಲ ಕೊಟ್ಟಿದ್ದೇವೆ. ಈ ವರ್ಷದ ಅಂತ್ಯಕ್ಕೆ ಕರ್ನಾಟಕಕ್ಕೆ 10,041 ಕೋಟಿ ರೂ. ಹಣ ಸಿಗಲಿದೆ'' ಎಂದು ತಿಳಿಸಿದರು. ಕಲಬುರಗಿಯಲ್ಲಿ ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಯಾಗಲಿದೆ. ಅದಕ್ಕಾಗಿ 200 ಕೋಟಿ ರೂ. ಅನುದಾನ ನೀಡಲಾಗುತ್ತಿದೆ'' ಎಂದು ವಿವರಿಸಿದರು.

7,559 ಕೋಟಿ ರೂ. ರೈಲ್ವೆ ಯೋಜನೆಗೆ ಹಂಚಿಕೆ: ''ರೈಲ್ವೆ ಯೋಜನೆಯ ಅನುದಾನಗಳ ಅಂಕಿಅಂಶವನ್ನು ನೋಡಿದರೆ ನಿಮಗೆ ಅಚ್ಚರಿಯಾಗುತ್ತೆ. ರೈಲ್ವೆ ಯೋಜನೆಗಳಿಗೆ ಯುಪಿಎ ಅವಧಿ 2009-14ರಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದು ಕೇವಲ 835 ಕೋಟಿ ಮಾತ್ರ. ಅದೇ ಮೋದಿ ಸರ್ಕಾರ 2024-25 ಬಜೆಟ್ ನಲ್ಲಿ 7,559 ಕೋಟಿ ರೂ. ಹಂಚಿಕೆ ಮಾಡಿದೆ'' ಎಂದು ಸಚಿವರು ತಿಳಿಸಿದರು.

''ಪ್ರಗತಿಯಲ್ಲಿರುವ 31 ರಾಜ್ಯದ ರೈಲ್ವೆ ಯೋಜನೆಯಡಿ 3,840 ಕಿ.ಮೀ. ರೈಲ್ವೆ ಹಳಿ ಹಾಕಲಾಗುತ್ತಿದೆ. ಅದಕ್ಕೆ 47,016 ಕೋಟಿ ರೂ. ಕೊಡಲಾಗುತ್ತಿದೆ. 2014ನಿಂದ ಈಚೆಗೆ ರಾಜ್ಯದಲ್ಲಿ 638 ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಿದೆ. 7 ವಂದೇ ಭಾರತ್ ರೈಲು ಈಗಾಗಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ'' ಎಂದರು.

''ಕೇಂದ್ರ ಸರ್ಕಾರ ಮಾರ್ಚ್ 2023ರಲ್ಲಿ ಧಾರವಾಡದಲ್ಲಿ ಐಐಟಿ ಘೋಷಣೆ ಮಾಡಿದೆ. ಮೊದಲ ದಕ್ಷಿಣ ಭಾರತ ಕೈಗಾರಿಕಾ ಕಾರಿಡಾರ್​ನ್ನು ಪ್ರಧಾನಿ ತುಮಕೂರಿನಲ್ಲಿ ಉದ್ಘಾಟನೆ ಮಾಡಿದ್ದಾರೆ. 6,428 ಕೋಟಿ ರೂ.ಗೂ ಹೆಚ್ಚಿಗೆ ಹಣವನ್ನು ಕರ್ನಾಟಕಕ್ಕೆ ಸ್ಮಾರ್ಟ್ ಸಿಟಿಗಾಗಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. 15,000 ಕೋಟಿ ಮೊತ್ತದ 904 ಯೋಜನೆಗೆ ಕಾರ್ಯಾದೇಶ ಹೊರಡಿಸಲಾಗಿದೆ. ಕರ್ನಾಟಕಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಕೆಲಸಗಳು ನಡೆಯುತ್ತಿದೆ'' ಎಂದು ತಿಳಿಸಿದರು.

''ಜನವರಿ 2024ರಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಬೆಂಗಳೂರಲ್ಲಿ ಸ್ಥಾಪಿಸಿದೆ. ಇದು ಅಮೆರಿಕ ಬಿಟ್ಟರೆ ಹೊರಗಿರುವ ಅತಿ ದೊಡ್ಡ ಘಟಕವಾಗಿದೆ. ಇದಕ್ಕೆ 1,600 ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಕೇಂದ್ರ ಸರ್ಕಾರದ ನೀತಿ, ಬಂಡವಾಳ ಸ್ನೇಹಿ ನೀತಿಯಿಂದ ಇದು ಸಾಧ್ಯವಾಗಿದೆ'' ಎಂದು ತಿಳಿಸಿದರು.

''ರಾಜ್ಯದಲ್ಲಿ 4,600 ಕಿ.ಮೀ. ರಸ್ತೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಎನ್​ಡಿಎ ಸರ್ಕಾರದ ಅವಧಿಯಲ್ಲಿ ಹೆದ್ದಾರಿ ಯೋಜನೆಗೆ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತದ ಯೋಜನೆ ಜಾರಿಯಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಅಭಿವೃದ್ಧಿಯಾಗುತ್ತಿದೆ. ಹುಬ್ಬಳ್ಳಿ, ಬೆಳಗಾವಿ ಟರ್ಮಿನಲ್ ಅಡಿಪಾಯ ಹಾಕಲಾಗಿದೆ. ಇದೆಲ್ಲಾ ಕೇಂದ್ರ ಸರ್ಕಾರದ ಕೊಡುಗೆಯಾಗಿದೆ'' ಎಂದು ತಿಳಿಸಿದರು.

ಹಣದುಬ್ಬರ ಹೆಚ್ಚಿಸಿದ ಕಾಂಗ್ರೆಸ್ ಸರ್ಕಾರ:''ರಾಜ್ಯ ಸರ್ಕಾರದ ಕೊಡುಗೆ ಏನಿದೆ? ರಾಷ್ಟ್ರೀಯ ಸರಾಸರಿಗಿಂತ ರಾಜ್ಯದಲ್ಲಿ ಹೆಚ್ಚಿನ ಹಣದುಬ್ಬರವಾಗಿದೆ. 5.5% ರಾಷ್ಟ್ರೀಯ ಸರಾಸರಿ ಇದ್ದರೆ, ಕರ್ನಾಟಕದ ಹಣದುಬ್ಬರ ಪ್ರಸ್ತುತ 6.1% ಇದೆ'' ಎಂದು ಟೀಕಿಸಿದರು.

''ಜೂನ್ 2022- ಮೇ 2023 ಕರ್ನಾಟಕದ ಹಣದುಬ್ಬರ 5.39% ಇತ್ತು. ಆಗ ರಾಷ್ಟ್ರೀಯ ಸರಾಸರಿ 6% ಇತ್ತು. ರಾಷ್ಟ್ರೀಯ ಸರಾಸರಿಗಿಂತ ಹಣದುಬ್ಬರ ಕಡಿಮೆ ಇತ್ತು. ಈಗ ಒಂದು ವರ್ಷದಲ್ಲಿ ರಾಷ್ಟ್ರೀಯ ಸರಾಸರಿಗಿಂತ ರಾಜ್ಯದ ಹಣದುಬ್ಬರ ಅಧಿಕವಾಗಿದೆ. ಇದಕ್ಕೆ ಕಾರಣ ರಾಜ್ಯದಲ್ಲಿ ಪೆಟ್ರೋಲ್, ಡೇಸೆಲ್ ಬೆಲೆ ಏರಿಕೆ, ಹಾಲಿನ ದರ ಹೆಚ್ಚಳ, ಆಸ್ತಿ ಮಾರ್ಗಸೂಚಿ ದರ ಏರಿಕೆ, ಮುಂತಾದ ದರ ಏರಿಕೆಯಾಗಿದ್ದರಿಂದ ಸಹಜವಾಗಿ ರಾಜ್ಯದ ಹಣದುಬ್ಬರ ಹೆಚ್ಚಳವಾಗಿದೆ'' ಎಂದು ತಿರುಗೇಟು ನೀಡಿದರು.

ಒಂದು ಲಕ್ಷ ಕೋಟಿ ತಲುಪಿದೆ ರಾಜ್ಯದ ಸಾಲ:''ಕರ್ನಾಟಕದ ಆದಾಯ ಕೊರತೆ ಹೆಚ್ಚಿದೆ. ಬಂಡವಾಳ ವೆಚ್ಚ ಇಳಿಕೆಯಾಗಿದೆ. ಬಂಡವಾಳ ವೆಚ್ಚ ಹೆಚ್ಚಿಗೆ ಮಾಡಿಲ್ಲ ಅಂದರೆ ಉದ್ಯೋಗ ಸೃಷ್ಟಿಯಾಗಲ್ಲ. ರಾಜ್ಯದಲ್ಲಿ ಬಂಡವಾಳ ವೆಚ್ಚ ವಿನಿಯೋಗ ಆಗುತ್ತಿಲ್ಲ. ಕರ್ನಾಟಕದ ಮುಕ್ತ ಮಾರುಕಟ್ಟೆ ಸಾಲ ಒಂದು ಲಕ್ಷ ಕೋಟಿ ರೂ. ತಲುಪಿದೆ. ಸಾಲದ ಮೇಲೆ ಸಾಲ ಮಾಡಿ ಭರವಸೆಗಳನ್ನು ಈಡೇರಿಸುತ್ತಿದ್ದಾರೆ'' ಎಂದು ಕಿಡಿ ಕಾರಿದರು.

''ಎರಡು ವರ್ಷದ ಹಿಂದೆ ರಾಜ್ಯದಲ್ಲಿ ಉಳಿತಾಯದ ಬಜೆಟ್ ಇತ್ತು. ಈಗ ಆದಾಯ ಕೊರತೆಯ ಬಜೆಟ್ ಇದೆ. ಕೈಗಾರಿಕೆಗಳು ರಾಜ್ಯವನ್ನು ಬಿಟ್ಟು ಹೋಗುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಸ್ಸಿ, ಎಸ್ಟಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ನಡೆಯುತ್ತಿದೆ. ರಾಜ್ಯದ ಆರ್ಥಿಕತೆ ಆರೋಗ್ಯವಾಗಿತ್ತು. ಉಳಿತಾಯ ಬಜೆಟ್, ಅಧಿಕ ಬಂಡವಾಳ ವೆಚ್ಚ ಮಾಡುತ್ತಿದ್ದ ರಾಜ್ಯ, ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದ ರಾಜ್ಯ ಕರ್ನಾಟಕ ಈಗಿನ ಆಡಳಿತದಿಂದ ಹೂಡಿಕೆದಾರರನ್ನು ಭೀತಿಗೊಳಪಡಿಸಿ, ರಾಜ್ಯ ಬಿಟ್ಟು ಹೊರ ಹೋಗುವಂತೆ ಮಾಡಿದೆ'' ಎಂದು ದೂರಿದರು.

''ನಾವು ಏಂಜೆಲ್ ತೆರಿಗೆ ರದ್ದು ಮಾಡಿದ್ದೇವೆ. ಆ ತೆರಿಗೆಯನ್ನು ಯುಪಿಎ ಸರ್ಕಾರ ತಂದಿದ್ದರು. ಹಂತ ಹಂತವಾಗಿ ತೆರಿಗೆಯನ್ನು ರದ್ದು ಮಾಡುತ್ತಿದ್ದೇವೆ. ಆ ಮೂಲಕ ಸ್ಟಾರ್ಟ್ಅಪ್​ಗೆ ಹೆಚ್ಚಿನ ಹಣ ಲಭ್ಯವಾಗಲಿದೆ. ಮಹಿಳೆಯರಿಗೆ 3 ಲಕ್ಷ ಕೋಟಿ ಅನುದಾನ ಕೊಟ್ಟಿದ್ದೇವೆ. ಕೃಷಿ ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಿದ್ದೇವೆ. ಇದರಿಂದ ಕರ್ನಾಟಕದ ಬೆಂಗಳೂರು ಮತ್ತು ರಾಯಚೂರು ಕೃಷಿ ವಿಜ್ಞಾನ ವಿವಿಗೆ ಅನುದಾನ ಸಿಗಲಿದೆ‌. 1 ಕೋಟಿ ರೈತರು ನೈಸರ್ಗಿಕ ಕೃಷಿ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಹಲವು ಉತ್ಪನ್ನಗಳ ಮೇಲೆ ಮೂಲ ಕಸ್ಟಮ್ ಡ್ಯೂಟಿಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ಕೈಗಾರಿಕೆಗಳಿಗೆ ಕಚ್ಚಾ ಉತ್ಪನ್ನ ಬೆಲೆ ಕಡಿಮೆಯಾಗಲಿದೆ'' ಎಂದರು.

''ಆದಾಯ ತೆರಿಗೆ ಕಡಿತಗೊಳಿಸಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್​ನ್ನು 75,000 ರೂ. ಗೆ ಹೆಚ್ಚಿಸಲಾಗಿದೆ. ಪಿಂಚಣಿದಾರರ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು 15,000 ರೂ. ನಿಂದ 25,000 ರೂ. ಏರಿಕೆ ಮಾಡಿದ್ದೇವೆ. ಇದರಿಂದ 4 ಕೋಟಿ ರೂ. ಸಂಬಳದಾರರಿಗೆ ಅನುಕೂಲವಾಗಲಿದೆ. ಆದಾಯ ತೆರಿಗೆ ಕಟ್ಟುವವರ ಮೇಲೆ 17,500 ರೂ. ತೆರಿಗೆ ಉಳಿತಾಯವಾಗಲಿದೆ'' ಎಂದು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ:ಎಸ್​ಸಿ-ಎಸ್​ಟಿ ಹಣ ದೋಚಿ, ಸಿದ್ದರಾಮಯ್ಯ ಆ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದು ಇದೆನಾ?: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ - valmiki nigama scam

ABOUT THE AUTHOR

...view details