ಬೆಳಗಾವಿ: ಭಾರತದ ನಯಾಗರ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್ ನಿರೀಕ್ಷಿಸಿದಷ್ಟು ಅಭಿವೃದ್ಧಿ ಕಂಡಿಲ್ಲ. ಜಲಪಾತದ ದೃಶ್ಯವೈಭವವನ್ನು ಪೂರ್ತಿಯಾಗಿ ಕಣ್ತುಂಬಿಕೊಳ್ಳಲು ಸೂಕ್ತ ವ್ಯವಸ್ಥೆಯೇ ಇಲ್ಲಿಲ್ಲ ಎಂಬ ಕೊರಗು ಪ್ರವಾಸಿಗರನ್ನು ಕಾಡುತ್ತಿದೆ. ಈ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಹೌದು, ಪಶ್ಚಿಮಘಟ್ಟಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗೋಕಾಕ್ ಫಾಲ್ಸ್ಗೆ ಜೀವ ಕಳೆ ಬಂದಿದೆ. 181 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ಜಲವೈಭವ ಕಣ್ತುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಜನರು ಆಗಮಿಸುತ್ತಾರೆ. ಹೀಗೆ ಬರುವ ಜನರಿಗೆ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತ ಸುತ್ತಲೂ ಬ್ಯಾರಿಕೇಡ್ ಅಳವಡಿಸಿದ್ದು, ದೂರದಿಂದಲೇ ನಿಂತು ಜಲಪಾತ ನೋಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಗೋಕಾಲ್ ಫಾಲ್ಸ್ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯ:ಏಷ್ಯಾದಲ್ಲಿಯೇ ಮೊದಲ ಜಲವಿದ್ಯುತ್ ಉತ್ಪಾದನೆ ಆರಂಭ ಆಗಿರುವುದು ಇಲ್ಲಿ ಎನ್ನುವುದು ಮತ್ತೊಂದು ವಿಶೇಷ. ಗೋಕಾಕ್ ಜಲಪಾತದ ಬಳಿ ಇರುವ ಗೋಕಾಕ್ ಮಿಲ್ ಕರ್ನಾಟಕದ ಅತ್ಯಂತ ಹಳೆಯ ಜವಳಿ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿದೆ. ಇನ್ನು ಜಲಪಾತದ ಕೂಗಳತೆಯಲ್ಲೇ ಇರುವ ಪ್ರಾಚೀನ ಮಹಲಿಂಗೇಶ್ವರ ದೇವಸ್ಥಾನ ಇತಿಹಾಸದ ಪಳೆಯುಳಿಕೆಯಾಗಿ ಉಳಿದಿದ್ದು, ಆ ಕಾಲದ ಶಿಲ್ಪವೈಭವದ ಅನಾವರಣಕ್ಕೆ ಸಾಕ್ಷಿಯಾಗಿದೆ. ಇನ್ನು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಫಾಲ್ಸ್ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಆದರೆ, ಇಲ್ಲಿ ಅಂದುಕೊಂಡಷ್ಟು ಅಭಿವೃದ್ಧಿ ಆಗಿಲ್ಲ. ಜಲಪಾತದ ನಯನಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಇನ್ನು ಸ್ವಚ್ಛತೆ ಅಂತೂ ಅಷ್ಟಕ್ಕಷ್ಟೇ. ಊಟ-ಉಪಹಾರಕ್ಕೆ ಸುಸಜ್ಜಿತ ಹೋಟೆಲ್ಗಳು ಇಲ್ಲ. ಏನಾದರೂ ಬೇಕಾದರೆ 10 ಕಿ.ಮೀ. ಕ್ರಮಿಸಿ ಗೋಕಾಕ್ಗೆ ಹೋಗಬೇಕು. ಸರ್ಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಫಾಲ್ಸ್ ಅಭಿವೃದ್ಧಿಗೆ ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಪ್ರವಾಸಿಗರ ಆರೋಪ.
ಗೋಕಾಕ್ ಫಾಲ್ಸ್‌ನಲ್ಲಿ ಅಗತ್ಯ ಅಭಿವೃದ್ಧಿ ಯಾವುದು?:ಜಲಪಾತ ವೀಕ್ಷಿಸುವಾಗ ಪ್ರಾಣಾಪಾಯ ಸಂಭವಿಸದಂತೆ ಸುತ್ತಲೂ ತಡಗೋಡೆ ನಿರ್ಮಿಸಬೇಕು. ಇನ್ನು ಬ್ರಿಟಿಷ್ ಕಾಲದಲ್ಲಿ ನಿರ್ಮಿಸಿರುವ ತೂಗುಸೇತುವೆ ಮೇಲೆ ಮೊದಲೆಲ್ಲಾ ಜಲಪಾತ ಧುಮ್ಮಿಕ್ಕುವ ದೃಶ್ಯ ನೋಡಿ ಪ್ರವಾಸಿಗರು ರೋಮಾಂಚನಗೊಳ್ಳುತ್ತಿದ್ದರು. ಆದರೆ, ಈಗ ತೂಗು ಸೇತುವೆ ಹಾಳಾಗಿದ್ದು, ದುರಸ್ತಿ ಪಡಿಸಬೇಕಿದೆ. ಸುರಕ್ಷಿತವಾಗಿ, ಸಮೀಪದಿಂದ ಫಾಲ್ಸ್ ಕಣ್ತುಂಬಿಕೊಳ್ಳಲು ಹೊಸ ಯೋಜನೆ ರೂಪಿಸುವ ಅವಶ್ಯಕತೆಯಿದೆ.
ಕನಸಾಗಿಯೇ ಉಳಿದ ಗಾಜಿನಸೇತುವೆ:ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರು ಗೋಕಾಕ್ ಫಾಲ್ಸ್‌ನಲ್ಲಿ 350 ಕೋಟಿ ವೆಚ್ಚದಲ್ಲಿ ನೀರು ಧುಮ್ಮಿಕ್ಕುವ ಸ್ಥಳದಿಂದ 20 ರಿಂದ 30 ಮೀಟರ್ ಅಂತರದಲ್ಲಿ ಅಮೆರಿಕಾದಲ್ಲಿನ ಗಾಜಿನ ಸೇತುವೆಯ ಮಾದರಿಯಲ್ಲಿ ಸೇತುವೆ ಹಾಗೂ ಯಾತ್ರಿ ನಿವಾಸ ನಿರ್ಮಾಣ ಮಾಡಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು, ನೀಲನಕ್ಷೆ ಸಹ ತಯಾರಾಗಿದೆ ಎಂದಿದ್ದರು. ಆದರೆ ಆ ಭರವಸೆ ಇನ್ನೂ ಈಡೇರಿಲ್ಲ. ಅದು ಕೇವಲ ಕನಸಾಗಿಯೇ ಉಳಿದಿದೆ.