ಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಎಸ್ (ಕೃಷ್ಣರಾಜಸಾಗರ) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿದೆ. 124.80 ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 92.80 ಅಡಿಗೆ ತಲುಪಿದೆ.
ಅಣೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, 18644 ಕ್ಯೂಸೆಕ್ ಒಳ ಹರಿವು ಇದ್ದರೆ, 496 ಕ್ಯೂಸೆಕ್ ಹೊರ ಬಿಡಲಾಗಿದೆ. ಕಾವೇರಿಯ ಉಗಮ ಸ್ಥಳ ಕೊಡಗು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಇದರಿಂದ ಒಂದೇ ದಿನದಲ್ಲಿ ಎರಡು ಅಡಿ ನೀರು ಬಂದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ.
ಕಬಿನಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲೂ ಭಾರೀ ಹೆಚ್ಚಳವಾಗಿದೆ. 84 ಅಡಿಗಳ ಸಾಮರ್ಥ್ಯವಿರುವ ಜಲಾಶಯದ ಇಂದಿನ ಮಟ್ಟ 75.06 ಅಡಿ ತಲುಪಿದೆ. 17873 ಕ್ಯೂಸೆಕ್ ಅದರ ಒಳ ಹರಿವು ಇದ್ದರೆ, 2000 ಕ್ಯೂಸೆಕ್ ಹೊರ ಹರಿವು ಇದೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ಕೊಂಚ ತಗ್ಗಿದ ಮಳೆ: ಮೂರು ದಿನಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ - Rain Alert In Karnataka
ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದರೂ ಕೊಂಚ ಇಳಿಮುಖ ಕಾಣುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವಾರ ರೆಡ್ ಮತ್ತು ಆರಂಜ್ ಅಲರ್ಟ್ ನೀಡಿದ್ದ ಹವಾಮಾನ ಇಲಾಖೆ, ಶನಿವಾರದಿಂದ ಮೂರು ದಿನಗಳಿಗೆ ಅನ್ವಯವಾಗುವಂತೆ ಯೆಲ್ಲೋ ಅಲರ್ಟ್ ನೀಡಿದೆ. ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಕೂಡ ಸೂಚಿಸಿದೆ.
ಕರಾವಳಿ ಜಿಲ್ಲೆಯ ಹಲವು ಸ್ಥಳಗಳಲ್ಲಿ, ಉತ್ತರ ಒಳನಾಡಿನ ಕೆಲವು ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆ ಮಳೆ ಮುಂದುವರೆಯಲಿದೆ. ಶುಕ್ರವಾರ ಬೆಳಗ್ಗೆಯವರೆಗೆ ಅತಿ ಹೆಚ್ಚು ಮಳೆ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ತಲಾ 8 ಸೆ.ಮೀ ಮಳೆಯಾಗಿದೆ. ಇನ್ನು ಉಡುಪಿಯ ಕೋಟದಲ್ಲಿ 7, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ 6, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 5 ಸೆ.ಮೀ, ಉಪ್ಪಿನಂಗಡಿಯಲ್ಲಿ 4 ಸೆ.ಮೀ ಮಳೆ ಬಂದಿದೆ. ಉಳಿದಂತೆ ಪುತ್ತೂರಿನ ಹೆಚ್ಎಂಎಸ್, ಮೂಲ್ಕಿ, ಉಡುಪಿ ಜಿಲ್ಲೆಯ ಸಿದ್ದಾಪುರ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಮ್ಮರಡಿಯಲ್ಲೂ ಉತ್ತಮ ಮಳೆ ಸುರಿದಿದೆ.
ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ಆಕಾಶ ಇದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು 30 ರಿಂದ 31 ಡಿಗ್ರಿ ಇರಲಿದೆ ಎಂದು ಹೇಳಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ಹೇಳಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ: ಭಾನುವಾರ ನಗರದ ವಿವಿಧೆಡೆ ಕರೆಂಟ್ ಕಟ್, ನಿಮ್ಮ ಏರಿಯಾದಲ್ಲೂ? - Power Cut Alert