ಬೆಳಗಾವಿ:ಕಳೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮತದಾನ ದಾಖಲಾಗಿದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಈ ಸಲ ಜನರ ಉತ್ಸಾಹ ಕಂಡು ಬಂತು. ಮೂರು ಲೋಕಸಭಾ ಮತ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಶೇ.74.87 ರಷ್ಟು ಮತದಾನವಾಗಿದೆ.
01- ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.78.51 ಮತ್ತು 02-ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ.71.38 ರಷ್ಟು ಮತದಾನವಾಗಿದೆ. ಅದೇ ರೀತಿ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.73.87 ಮತ್ತು ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 76.25 ರಷ್ಟು ಮತದಾನವಾಗಿದೆ.
ಹೌದು, ರಣ ರಣ ಬಿಸಿಲಿನಲ್ಲೂ ಇಂದು ನಡೆದ ಚುನಾವಣೆಯಲ್ಲಿ ಬೆಳಗ್ಗೆಯಿಂದಲೂ ಮತಗಟ್ಟೆಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ 2019 ರಲ್ಲಿ ಶೇ.75.52 ರಷ್ಟು ಮತದಾನವಾಗಿದ್ದರೆ, 2024 ರಲ್ಲಿ ಶೇ.78.51 ರಷ್ಟು ಮತದಾನವಾಗುವ ಮೂಲಕ ಶೇ.3ರಷ್ಟು ಹೆಚ್ಚಳವಾಗಿದೆ. ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಶೇ. 67.70 ರಷ್ಟು ಮತದಾನವಾಗಿತ್ತು. ಈ ಬಾರಿ 2024ರಲ್ಲಿ ಶೇ.71.38 ರಷ್ಟು ಮತದಾನವಾಗುವ ಮೂಲಕ ಪ್ರತಿಶತ 4 ರಷ್ಟು ಹೆಚ್ಚಳವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾರು ಮತದಾನ ವಿವರ:ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೇ.76.87, ಸವದತ್ತಿ ಯಲ್ಲಮ್ಮ ಶೇ.76.73, ರಾಮದುರ್ಗ ಶೇ.73.06, ಬೈಲಹೊಂಗಲ ಶೇ.73.05, ಅರಭಾವಿ ಶೇ.71.92, ಗೋಕಾಕ್ ಶೇ.71.06, ಬೆಳಗಾವಿ ದಕ್ಷಿಣ ಶೇ.66.52 ಮತ್ತು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶೇ.63.42 ಮತದಾನವಾಗಿದೆ.
ಮತದಾನದ ವಿವರ | |
ವಿಧಾನಸಭಾ ಕ್ಷೇತ್ರ | ಶೇಕಡಾವಾರು |
ಬೆಳಗಾವಿ ಗ್ರಾಮೀಣ | 76.87 |
ಸವದತ್ತಿ ಯಲ್ಲಮ್ಮ | 76.73 |
ರಾಮದುರ್ಗ | 73.06 |
ಬೈಲಹೊಂಗಲ | 73.05 |
ಅರಭಾವಿ | 71.92 |
ಗೋಕಾಕ್ | 71.06 |
ಬೆಳಗಾವಿ ದಕ್ಷಿಣ | 66.52 |
ಬೆಳಗಾವಿ ಉತ್ತರ | 63.42 |