ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಹೇಳಿಕೆ ದಾವಣಗೆರೆ:ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಮತ್ತು ಸುತ್ತ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಆವರಿಸಿಕೊಂಡಿರುವ ಕೆರೆ ಅಂದ್ರೆ ಅದು ಸೂಳೆಕೆರೆ. ದಾವಣಗೆರೆ ಗ್ರಾಮಾಂತರ, ಜಗಳೂರು, ಚನ್ನಗಿರಿ ಹಾಗು ನೆರೆಯ ಜಿಲ್ಲೆ ಚಿತ್ರದುರ್ಗ ಸೇರಿದಂತೆ 125ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸುವ ಏಕೈಕ ಜೀವ ಸೆಲೆ ಇದಾಗಿದೆ. ಆದ್ರೆ ಈ ಕೆರೆಗೆ ಈಗ ಜಲಕ್ಷಾಮ ಆವರಿಸಿದೆ. ದುರಂತ ಎಂದ್ರೇ ಕೆರೆಯ ಒಡಲು ಖಾಲಿಯಾಗಿದ್ದು, ಮುಂದಿನ 20 ದಿನಗಳಿಗಾಗುವಷ್ಟು ಮಾತ್ರ ಕೆರೆಯಲ್ಲಿ ನೀರು ಸಂಗ್ರಹವಿದೆ.
ಬರಿದಾಗುತ್ತಿದೆ ಶಾಂತಿಸಾಗರ:ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿಸಾಗರ (ಸೂಳೆಕೆರೆ) ಬರಿದಾಗುತ್ತಿದೆ. ದಿನದಿಂದ ದಿನಕ್ಕೆ ನೀರು ತಳಮಟ್ಟಕ್ಕೆ ಇಳಿಕೆಯಾಗುತ್ತಿದೆ. ಕೆರೆಯಲ್ಲಿರುವ ಕುದುರೆ ಕಲ್ಲ ಎಂಬ ತೂಬಿನ ಕೆಳಗೆ ನೀರು ಬಂದಿದ್ದರಿಂದ ಈ ಬಾರಿ ಕ್ಷಾಮ ಕಟ್ಟಿಟ್ಟ ಬುತ್ತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಹಳ್ಳಿಗಳಿಗೆ ನೀರಿನ ಪ್ರಮುಖ ಸೆಲೆಯಾಗಿರುವ ಶಾಂತಿಸಾಗರದಲ್ಲಿ ಪ್ರಸ್ತುತವಾಗಿ ಕೇವಲ 20 ದಿನಗಳಗಾಗುವಷ್ಟು ನೀರಿದೆ ಎಂಬ ಆಘಾತಕಾರಿ ವಿಚಾರವನ್ನು ಜಿಲ್ಲಾಧಿಕಾರಿ ಹೊರಹಾಕಿದ್ದಾರೆ.
125ಕ್ಕೂ ಹೆಚ್ಚು ಗ್ರಾಮಗಳಿಗೆ ಜಲ ಕಂಟಕ: ಕೆರೆಯಲ್ಲಿ ನೀರು ಖಾಲಿಯಾದರೇ ದಾವಣಗೆರೆ ಗ್ರಾಮಾಂತರ, ಜಗಳೂರು, ಚನ್ನಗಿರಿ, ಹಾಗು ನೆರೆಯ ಜಿಲ್ಲೆ ಚಿತ್ರದುರ್ಗ ಜಿಲ್ಲೆಗೂ ಕುಡಿಯುವ ನೀರಿಗೆ ತತ್ವಾರ ಎದುರಾಗಲಿದೆ. ನೀರನ್ನು ಉಳಿಸಲು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಅವರು ಟೊಂಕಕಟ್ಟಿ ನಿಂತಿದ್ದಾರೆ. ಅಲ್ಲದೆ ಕೆರೆ ನೀರನ್ನು ಉಳಿಸಲು ಕೆರೆ ಹಿನ್ನೀರಿನಲ್ಲಿ ಅಡಿಕೆ ತೋಟದ ಮಾಲೀಕರು ಅಳವಡಿಸಿರುವ ಪಂಪ್ಸೆಟ್ಗಳನ್ನು ತೆಗೆದು ಹಾಕಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಭದ್ರಾ ಜಲಾಶಯದಿಂದ ಕೆರೆಗೆ ನೀರು: ಭದ್ರಾ ಜಲಾಶಯದಿಂದ ಕೆರೆಗೆ ನೀರು ಹರಿಸುವಂತೆ ಈ ಭಾಗದ ಖಡ್ಗ ಹೋರಾಟ ಸಮಿತಿಯವರು ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇದರಿಂದ ಮಾರ್ಚ್ 20 ರಿಂದ ಹಾಗು ಏಪ್ರಿಲ್ ತಿಂಗಳಿನಲ್ಲಿ ಭದ್ರಾ ಜಲಾಶಯದಿಂದ ದಿನ ನಿತ್ಯ ಐವತ್ತು ಕ್ಯೂಸೆಕ್ ನೀರನ್ನು ಹರಿಸಲು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಮಾಹಿತಿ ನೀಡಿದ್ದಾರೆ. ಆದ್ರೆ ಕೆರೆಯಲ್ಲಿ ನೀರಿನ ಅಭಾವ ಕಂಡುಬಂದ್ರೆ ಒಟ್ಟು 125ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿನ ಹಾಹಾಕಾರ ಎದುರಾಗುವುದಂತು ಗ್ಯಾರೆಂಟಿ ಆಗಿದೆ.
ಅಕ್ರಮ ಪಂಪ್ಸೆಟ್ಗಳಿಗೆ ಕಡಿವಾಣ:ಈವಿಚಾರವಾಗಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಶಾಂತಿಸಾಗರ (ಸೂಳೆಕೆರೆ) ಜಗಳೂರು, ಚನ್ನಗಿರಿ ನಗರ ಸೇರಿದಂತೆ 125ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ. ಕೆರೆಯಲ್ಲಿರುವ ನೀರು ಈ ಮಾರ್ಚ್ ತಿಂಗಳ 20 ರ ತನಕ ಆಗಲಿದ್ದು, ಮಾರ್ಚ್ 20 ರ ಬಳಿಕ ಭದ್ರಾ ಜಲಾಶಯದಿಂದ ಪ್ರತಿದಿನ 50 ಕ್ಯೂಸೆಕ್ ನೀರನ್ನು ಕಾಲುವೆ ಮೂಲಕ ಸೂಳೆಕೆರೆಗೆ ಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಏಪ್ರಿಲ್ ತಿಂಗಳಿನಲ್ಲೂ ಕೂಡ ಪ್ರತಿದಿನ 50 ಕ್ಯೂಸೆಕ್ ರಷ್ಟು ನೀರನ್ನು ದಿನನಿತ್ಯ ಹರಿಸಲು ನಿಗದಿಪಡಿಸಲಾಗಿದೆ. ಸದ್ಯದ ಮಟ್ಟಿಗೆ ಕೆರೆಯಲ್ಲಿ ಕುಡಿಯಲು ನೀರಿದ್ದು, ಅನಧಿಕೃತವಾಗಿ ಕೆರೆಗೆ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರಿನ ಕೊರತೆಯಾಗ್ತಿದೆ. ಅದ್ದರಿಂದ ಅಧಿಕಾರಿಗಳ ತಂಡ ನಿಯೋಜಿಸಿ, ಅಕ್ರಮ ಪಂಪ್ಸೆಟ್ಗಳನ್ನು ತೆಗೆದುಹಾಕಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಓದಿ:ತಾಯಿಯ ಆಸೆ ಪೂರೈಸಲು ಪಣ: ಕಾಶಿ, ಅಯೋಧ್ಯೆ ಸೇರಿ ವಿವಿಧ ಕ್ಷೇತ್ರಗಳಿಗೆ ಏಕಾಂಗಿ ಪಾದಯಾತ್ರೆ