ಬೆಂಗಳೂರು : ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕನ್ನಡಿಗರಿಗೆ ಉದ್ಯೋಗ ಬೇಕೋ , ಬೇಡವೋ. ಹಾಗಾಗಿಯೇ ಈ ವಿಧೇಯಕ ತರುತ್ತಿದ್ದೇವೆ. ಎಲ್ಲರಿಗೂ ಇದು ಒಳ್ಳೆಯದಾಗಲಿದೆ ಎಂದು ಹೇಳಿದರು. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಕೆಲವರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಅದರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಉತ್ತರ ಕೊಡ್ತಾರೆ ಎಂದರು.
ಕನ್ನಡಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ತರಲಾಗುತ್ತಿದೆ. ಇಲ್ಲಿ ನಾಲ್ಕು ವರ್ಷ ಇದ್ದರೆ ಅವರೂ ಕನ್ನಡಿಗರೇ ಆಗ್ತಾರೆ. ಬ್ಯುಸಿನೆಸ್ಗೆ ಹೊಡೆತ ಬೀಳಲ್ಲವೇ? ಎಂಬ ಪ್ರಶ್ನೆಗೆ, ಬೇರೆಯವರು ಇಲ್ಲಿ ಉದ್ಯಮ ಮಾಡ್ತಾರೆ. ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ನಿರುದ್ಯೋಗ ಸಮಸ್ಯೆ, ರಾಜ್ಯ, ದೇಶದಲ್ಲೂ ಹೆಚ್ಚಾಗಿದೆ. ಕನಿಷ್ಠ ನಾಲ್ಕು ವರ್ಷ ಉಳಿದರೆ ಅವರು ಕನ್ನಡಿಗರು. ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ರೆ ಈ ಸಮಸ್ಯೆ ಬರ್ತಿರಲಿಲ್ಲ. ಬೆಂಗಳೂರಿನಲ್ಲಿ ಅರ್ಧದಷ್ಟು ಬೇರೆ ಭಾಷೆ ಜನ ಇದ್ದಾರೆ. ಅವರೆಲ್ಲ ಕನ್ನಡ ಕಲಿಯಲಿ, ಉದ್ಯೋಗ ಸಿಗಲಿದೆ. ಒಂದು ಕಡೆ ಉದ್ಯೋಗ ಸೃಷ್ಟಿ ಮಾಡಬೇಕು. ಎಲ್ಲವನ್ನು ದೃಷ್ಟಿಯಲ್ಲಿಟ್ಟು ಕಾನೂನು ಮಾಡುತ್ತೇವೆ. ನೂರಕ್ಕೂ ನೂರು ಉದ್ಯೋಗ ಅಲ್ಲ. ಇಂತಿಷ್ಟು ಪರ್ಸೆಂಟ್ ಅಂತ ಕನ್ನಡಿಗರಿಗೆ ಉದ್ಯೋಗ ನಿಗದಿ ಮಾಡಿದ್ರೆ ಒಳ್ಳೆಯದು ಎಂದರು.
ಕಾನೂನು ಓದಿಲ್ಲ :ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಕಾನೂನು ಸಲಹೆಗಾರ, ಶಾಸಕ ಎ. ಎಸ್ ಪೊನ್ನಣ್ಣ ಅವರು, ಈ ಬಗ್ಗೆ ಕಾನೂನುಗಳನ್ನು ನಾನು ಓದಿಲ್ಲ. ತಿಳಿದುಕೊಳ್ಳದೇ ನಾನು ಮಾತನಾಡುವುದಿಲ್ಲ. ಖಾಸಗಿ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳ ಮೇಲೆ ಕಾನೂನು ತರಬೇಕಾದರೆ ಸಂವಿಧಾನದ ಅಂಶಗಳ ಅಡಿ ಹಕ್ಕುಗಳ ಉಲ್ಲಂಘನೆಯಾಗದಂತೆ ಕಾನೂನು ಜಾರಿ ಮಾಡಬೇಕು. ಗಂಭೀರವಾಗಿ ಅಧ್ಯಯನ ಮಾಡಿ ಅದನ್ನು ಜಾರಿಮಾಡುವ ಕೆಲಸವಾಗುತ್ತದೆ ಎಂದು ಹೇಳಿದರು.
ಖಾಸಗಿ ಕಂಪನಿಗಳಿಗೆ ಹಾಗೂ ವ್ಯಕ್ತಿಗಳಿಗೆ ರಾಜ್ಯಾಂಗ, ರಾಜ್ಯದ ಸಂಸ್ಥೆಗಳಿಗಿಂತ ಹೆಚ್ಚಿನ ಫಂಡಮೆಂಟಲ್ ರೈಟ್ಸ್ ಇರುತ್ತವೆ. ಸರ್ಕಾರ ಆಗಲಿ ಅದರಲ್ಲಿ ಹಸ್ತಕ್ಷೇಪ ಮಾಡುವುದು ಕಡಿಮೆ. ಕನ್ನಡಿಗರಿಗೆ ಮೀಸಲಾತಿ ಕೊಡುವುದರಲ್ಲಿ ಸಂಶಯವಿಲ್ಲ. ಆದರೆ, ಅದರಲ್ಲಿ ಶಾಲೆಗಳು, ಸರ್ಕಾರದ ಅನುದಾನ ಪಡೆಯುವಂತಹ ಸಂಸ್ಥೆಗಳಲ್ಲಿ ಮೀಸಲಾತಿ ಕೊಡಬಹುದು.
ಸಂಪೂರ್ಣ ಖಾಸಗಿ ಸಂಸ್ಥೆಗಳಿಗೆ ಮೀಸಲಾತಿ ಕೊಡುವ ವೇಳೆ ಅದನ್ನ ಸಂಪೂರ್ಣ ಪರಿಶೀಲನೆ ಮಾಡಿ ಕೊಡಬೇಕಾಗುತ್ತದೆ. ನ್ಯಾಯಾಲಯಗಳಲ್ಲಿ ಯಾವತ್ತಾದರೂ ಒಂದು ದಿನ ಪ್ರಶ್ನೆ ಮಾಡಿದರೆ ಅದರಲ್ಲೂ ಯಶಸ್ವಿಯಾಗಬೇಕು. ಕ್ಯಾಬಿನೆಟ್ನಲ್ಲಿ ಮಾಡಿರುತ್ತಾರೆ ಅಂದ್ರೆ ಸಂಪೂರ್ಣ ಅಧ್ಯಯನ ಮಾಡಿರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕನ್ನಡಿಗರ ಏಳಿಗೆಗೆ ಬದ್ಧವಾಗಿದೆ ಎಂದರು.
ಇದನ್ನೂ ಓದಿ :ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ: ಪ್ರಸ್ತಾವನೆ ಮರುಪರಿಶೀಲಿಸುವಂತೆ ಎಫ್‌ಕೆಸಿಸಿಐ ಆಗ್ರಹ - FKCCI ON EMPLOYMENT RESERVATION