ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ, 3.63 ಲಕ್ಷ ಕಾರ್ಡ್ ರದ್ದು: ಸಚಿವ ಮುನಿಯಪ್ಪ - BPL CARD

3.63 ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲಾಗಿದೆ. ಜೊತೆಗೆ, ಸರ್ಕಾರಿ ನೌಕರರು ಹೊಂದಿದ್ದ ಬಿಪಿಎಲ್ ಕಾರ್ಡ್‌ಗಳನ್ನೂ ರದ್ದು ಮಾಡಿ ಅವರಿಗೆ ದಂಡ ಹಾಕಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಮಾಹಿತಿ ನೀಡಿದರು.

ಸಚಿವ ಕೆ.ಹೆಚ್.ಮುನಿಯಪ್ಪ
ಸಚಿವ ಕೆ.ಹೆಚ್.ಮುನಿಯಪ್ಪ (ETV Bharat)

By ETV Bharat Karnataka Team

Published : Oct 21, 2024, 9:37 PM IST

ಬೆಂಗಳೂರು: ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 3.63 ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ, ಬಳಿಕ ಮಾತನಾಡಿದರು.

ರಾಜ್ಯದಲ್ಲಿ 13.87 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಯಾಗಿದ್ದು, ಈ ಪೈಕಿ 3.63 ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇನ್ನೂ 3.97 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ರದ್ದಾಗಬೇಕಿದೆ.‌ ಸುಮಾರು 4,036 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು, ಈ ಪೈಕಿ 2,964 ರದ್ದು ಮಾಡಿ, ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.

6 ತಿಂಗಳಿಂದ ಪಡಿತರ ಪಡೆಯದಿರುವುದು, ಒಂದು ವರ್ಷದಿಂದ DBT ಸ್ವೀಕೃತವಾಗದೇ ಇರುವುದು, ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು, ವಾರ್ಷಿಕ ವರಮಾನ ಹೆಚ್ಚಿರುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಅನರ್ಹ ಕಾರ್ಡ್‌ಗಳು ಇರಬಹುದೆಂದು ಅಂದಾಜಿಸಲಾಗಿದೆ. ಇವುಗಳನ್ನು ಪರಿಶೀಲಿಸಿದರೆ ಕನಿಷ್ಠ 10ರಿಂದ 12 ಲಕ್ಷ ಅನರ್ಹ ಪಡಿತರ ಚೀಟಿ ಪತ್ತೆಯಾಗಬಹುದು. ಈ ರೀತಿ ಪತ್ತೆಯಾದ ಅನರ್ಹ ಕಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಕಾರ್ಡ್‌ಗಳನ್ನು ನೀಡಲು ಮುಂದಿನ ದಿನಗಳಲ್ಲಿ ಹೊಸ ಅರ್ಜಿ ಆಹ್ವಾನಿಸಲಾಗುವುದು ಎಂದರು.

ನಗದು ವರ್ಗಾವಣೆ (DBT) ಸ್ಥಿತಿಗತಿ:ಜುಲೈ-2024ರ ತಿಂಗಳಲ್ಲಿ 1,15,61,765 ಕಾರ್ಡ್‌ಗಳ 4,08,46,548 ಫಲಾನುಭವಿಗಳಿಗೆ 670.45 ಕೋಟಿ ರೂ ಡಿಬಿಟಿ ಮಾಡಲಾಗಿದೆ. ಡಿಬಿಟಿ ಪ್ರಾರಂಭವಾದ 2023ರ ಜುಲೈಯಿಂದ 2024ರ ಜುಲೈವರೆಗೆ 8433.11 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. ಡಿಬಿಟಿ ಮೂಲಕ ಪ್ರತಿಯೊಬ್ಬರಿಗೆ 170 ರೂ. ಕೊಡುತ್ತಿದ್ದೇವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಬಾಕಿ‌ ಇದೆ. ಶೀಘ್ರವೇ ಹಣ ಖಾತೆಗೆ ವರ್ಗಾವಣೆ ಮಾಡಲಾಗುವುದು‌. ಸರ್ವರ್ ಸಮಸ್ಯೆ ಇದೆ, ಇಂದಿನಿಂದ ಆ ಸಮಸ್ಯೆ ಇರುವುದಿಲ್ಲ. ಪ್ರಸ್ತುತ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ DBT ನೀಡುತ್ತಿರುವುದನ್ನು ಮುಂದುವರೆಸಲಾಗುತ್ತದೆ. ಪಡಿತರ ಚೀಟಿ ಪರಿಷ್ಕರಣೆ ಬಳಿಕ ಮುಂದೆ ಹಣದ ಬದಲು ಅಕ್ಕಿ ಕೊಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಕೆ.ಜಿಗೆ 28 ರೂ. ದರದಲ್ಲಿ ಅಕ್ಕಿ ಕೊಡಲು ಕೇಂದ್ರ ಒಪ್ಪಿಗೆ:ಕಳೆದ ವರ್ಷ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಈಗ ಅಕ್ಕಿ ಕೊಡಲು ಮುಂದೆ ಬಂದಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ್ದೇವೆ. ಕೇಂದ್ರ ಸರ್ಕಾರ 9-07-2024ರಂದು ಹೊರಡಿಸಿರುವ ಆದೇಶದಲ್ಲಿ OMSS(D)ಅಡಿ 2024-25ನೇ ಸಾಲಿನಲ್ಲಿ 01-08-2024ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಕ್ಕೆ ಪ್ರತಿ ಕೆ.ಜಿ.ಗೆ 28 ರೂ ದರದಲ್ಲಿ ಅಕ್ಕಿ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರ OMSS(D) ಯೋಜನೆಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಡ್​​ಗಳಿಗೆ ಬೇಕಾಗುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು 28 ರೂ ದರದಲ್ಲಿ FCI ಮೂಲಕ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಡ್​​ಗಳ ಪರಿಷ್ಕರಣೆ ಮಾಡುತ್ತಿದ್ದೇವೆ. ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದೇವೆ. ಅದಾದ ಬಳಿಕ ಆಹಾರ ಕಿಟ್ ವಿತರಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಕಳೆದ ಕ್ಯಾಬಿನೆಟ್​​ನಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೆವು. ಕಾರ್ಡ್​ಗಳ ಪೂರ್ಣ ಪರಿಶೀಲನೆ ಬಳಿಕ ಆಹಾರ ಕಿಟ್ ವಿತರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಬೇಳೆ, ಎಣ್ಣೆಯನ್ನೊಳಗೊಂಡ ಆಹಾರ ಕಿಟ್ ವಿತರಣೆ ವಿಚಾರವಾಗಿ ಸಚಿವರು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್; ಸ್ವತಂತ್ರ ಸ್ಪರ್ಧೆಗೆ ಸೈನಿಕನ ಇಂಗಿತ

ABOUT THE AUTHOR

...view details