ಕರ್ನಾಟಕ

karnataka

ETV Bharat / state

ಭಾರತದ ಬಲವಾದ ಆರ್ಥಿಕ ಸ್ಥಿತಿಗೆ ಸದೃಢ ಕುಟುಂಬ ವ್ಯವಸ್ಥೆ ಕಾರಣ: ಐಐಎಂ ನಿವೃತ್ತ ಪ್ರಾಧ್ಯಾಪಕ ವೈದ್ಯನಾಥನ್ - Vaidyanathan - VAIDYANATHAN

ಭಾರತದಲ್ಲಿ ಸಾಮಾನ್ಯ ಮಹಿಳೆಯೂ ಕೂಡ ತನ್ನ ಕುಟುಂಬದ ಆರ್ಥಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ಅನಾದಿಕಾಲದಿಂದಲೂ ವಹಿಸುತ್ತಿದ್ದಾಳೆ ಎಂದು ಬೆಂಗಳೂರು ಐಐಎಂನ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ವೈದ್ಯನಾಥನ್ ತಿಳಿಸಿದರು.

ಐಐಎಂ ನಿವೃತ್ತ ಪ್ರಾಧ್ಯಾಪಕ ವೈದ್ಯನಾಥನ್
ಐಐಎಂ ನಿವೃತ್ತ ಪ್ರಾಧ್ಯಾಪಕ ವೈದ್ಯನಾಥನ್ (ETV Bharat)

By ETV Bharat Karnataka Team

Published : Sep 8, 2024, 10:58 PM IST

ಬೆಂಗಳೂರು: ಭಾರತದ ಬಲವಾದ ಆರ್ಥಿಕ ಪರಿಸ್ಥಿತಿಗೆ ಇಲ್ಲಿ ಅಸ್ತಿತ್ವದಲ್ಲಿರುವ ಸದೃಢವಾದ ಕುಟುಂಬ ವ್ಯವಸ್ಥೆ ಮತ್ತು ಅದರ ಮೌಲ್ಯಗಳು ಪ್ರಮುಖವಾದ ಕಾರಣವಾಗಿದೆ. ಭಾರತದಲ್ಲಿ ಸಾಮಾನ್ಯ ಮಹಿಳೆಯೂ ಕೂಡ ತನ್ನ ಕುಟುಂಬದ ಆರ್ಥಿಕ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ಅನಾದಿಕಾಲದಿಂದಲೂ ವಹಿಸುತ್ತಿದ್ದಾಳೆ ಎಂದು ಬೆಂಗಳೂರು ಐಐಎಂನ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ವೈದ್ಯನಾಥನ್ ತಿಳಿಸಿದರು.

ನಗರದ ನೃಪತುಂಗ ರಸ್ತೆಯಲ್ಲಿರುವ ದಿ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ಭಾನುವಾರ ಪ್ರೊ.ಎಂ.ವಿ.ಕೃಷ್ಣರಾವ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಭಾರತದ ಮೇಲೆ ಅದರ ಪರಿಣಾಮಗಳು ಎಂಬ ವಿಷಯ ಕುರಿತು ಮಾತನಾಡಿದ ಅವರು, 1990ರ ಜಾಗತಿಕ ಆರ್ಥಿಕ ರೂಪುರೇಷೆಗಳನ್ನು ಗಮನಿಸಿದರೆ ಜಿ-7 ರಾಷ್ಟ್ರಗಳು ಜಗತ್ತಿನ ಆರ್ಥಿಕ ಸಂಪನ್ಮೂಲಗಳಲ್ಲಿ ಸುಮಾರು ಶೇ.51ರಷ್ಟು ಪ್ರಮಾಣವನ್ನು ಹೊಂದಿದ್ದರೆ, 2015ರ ವೇಳೆಗೆ ಆ ಪ್ರಮಾಣ ಸುಮಾರು ಶೇ.37ಕ್ಕೆ ಕುಸಿದಿದೆ. ಇಂತಹ ಆರ್ಥಿಕ ಬದಲಾವಣೆಗೆ ಅನೇಕ ಕಾರಣಗಳನ್ನು ಗುರುತಿಸಬಹುದಾಗಿದೆ ಎಂದರು.

ಮುಖ್ಯವಾಗಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕುಟುಂಬ ವ್ಯವಸ್ಥೆಯ ಬೇರುಗಳು ತೀವ್ರವಾಗಿ ಸಡಿಲಗೊಳ್ಳಲು ಪ್ರಾರಂಭಿಸಿವೆ. ಈ ಸಾಮಾಜಿಕ ಬದಲಾವಣೆ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಕೂಡ ಪರಿಣಾಮವನ್ನು ಬೀರುತ್ತಿದೆ. ಜೊತೆಗೆ, ಅನಧಿಕೃತ ನಿರಾಶ್ರಿತರ ವಲಸೆ ಮುಂತಾದವು ಕೂಡ ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಅಸಮತೋಲನವನ್ನು ಉಂಟುಮಾಡುತ್ತಿವೆ ಎಂದು ಹೇಳಿದರು.

ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದು, ಯುರೋಪಿಯನ್ ರಾಷ್ಟ್ರಗಳಲ್ಲಿ ಬಲಪಂಥೀಯ ಶಕ್ತಿಗಳ ಬೆಳವಣಿಗೆ ಮತ್ತು ಆ ದೇಶಗಳಲ್ಲಿಯೇ ನಡೆಯುತ್ತಿರುವ ಆಂತರಿಕ ಯುದ್ಧಗಳು ಪರಿಸ್ಥಿತಿಯನ್ನು ವಿಷಮ ಸ್ಥಿತಿಗೆ ಕೊಂಡೊಯ್ಯುತ್ತಿವೆ. ಆದರೆ, ಇದಕ್ಕೆ ಪ್ರತಿಯಾಗಿ ಭಾರತವು ಹಂತ-ಹಂತವಾಗಿ ಅನೇಕ ರಂಗಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಬದಲಾದ ಆರ್ಥಿಕ ಚಿತ್ರಣದಲ್ಲಿ ತಂತ್ರಜ್ಞಾನದ ವ್ಯಾಪಕವಾದ ಬಳಕೆ ಭಾರತದ ಅರ್ಥವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಜಿಎಸ್‌ಟಿ ಜಾರಿ, ಡಿಜಿಟಲ್ ಪೇಮೆಂಟ್, ಆನ್‌ಲೈನ್ ಸೇವೆಗಳು ಮುಂತಾದವುಗಳು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸುವುದರ ಜತೆಗೆ ಅದರ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿವೆ. ಈ ಕಾರಣದಿಂದ ಇಡೀ ವಿಶ್ವವೇ ಇಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಚಿತ್ರಣದ ಬೆಳವಣಿಗೆಯನ್ನು ನಿರಂತರವಾಗಿ ಗಮನಿಸುತ್ತಿದೆ ಎಂದು ಹೇಳಿದರು.

ಇಂದೇ ನಡೆದ ಪಂಡಿತ್ ಎ.ಸುಬ್ಬಯ್ಯಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಜೈನ ಆಗಮಗಳ ಆಗಮನ ಒಂದು ಚಿಂತನೆ ಕುರಿತು ಮಾತನಾಡಿದ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಯೋಜನಾ ಸಹಾಯಕಿ ಡಾ.ಡಿ.ತೇಜಸ್ವಿನಿ ಮಾತನಾಡಿ, ಜೈನ ಧರ್ಮವು ಜೀವನ್ಮುಕ್ತಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದೆ. ಅದು ಪಂಚೇಂದ್ರಿಯಗಳ ಸಹಾಯವಿಲ್ಲದೆ ಪಡೆಯುವ ಜ್ಞಾನಕ್ಕೆ ಪ್ರಾಧಾನ್ಯತೆಯನ್ನು ನೀಡಿದೆ. ಮುಂದೆ ಅದು ಅರಹಂತ ಪದವಿಯನ್ನು ಪಡೆಯಲು ಸಹಾಯವಾಗುತ್ತದೆ. ಜೈನಧರ್ಮದಲ್ಲಿ ಬರುವ ರಿದ್ದಿ ಸಂಪನ್ನರು ಋಷಿ ಸದೃಶ್ಯರಾದವರು. ದೇಹ ದಂಡನೆಯ ಮೂಲಕ ಸಮ್ಯಕ್ಯತ್ವವನ್ನು ಪಡೆದವರಾಗಿದ್ದರು. ಜಿತನಾದವನು ಜಿನನಾದಾಗ ಜೈನಧರ್ಮ ಅಸ್ತಿತ್ವಕ್ಕೆ ಬಂದಿತು. ಈ ಕಾರಣದಿಂದ ಭಾರತೀಯ ತತ್ವಶಾಸ್ತ್ರಗಳ ಸಂಪ್ರದಾಯದಲ್ಲಿ ಜೈನಧರ್ಮದ ಆಗಮನ ಒಂದು ಹೊಸದಾದ ಚಿಂತನಾ ಕ್ರಮದ ಬೆಳವಣಿಗೆಗೆ ನಾಂದಿಯಾಯಿತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್, ಗೌರವ ಕಾರ್ಯದರ್ಶಿ ಎಸ್.ರವಿ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ:ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ವೈದ್ಯಕೀಯ ಭತ್ಯೆ ದರ ಹೆಚ್ಚಿಸಿದ ಸರ್ಕಾರ - Medical Allowance Hike

ABOUT THE AUTHOR

...view details