ಬೆಂಗಳೂರು:ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದೇಶದ ನಾಗರಿಕರು ಆಕ್ಷೇಪಣೆ ಸಲ್ಲಿಸುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಭೂ ಸ್ವಾಧೀನದಲ್ಲಿ ತನ್ನ ಹೆಸರನ್ನು ಉಲ್ಲೇಖಿಸದ ಭೂ ಮಾಲೀಕರ ಭೂಮಿಯನ್ನು ಹಿಂದಿರುಗಿಸಲು ಸೂಚನೆ ನೀಡಿ ಆದೇಶಿಸಿದೆ.
ಮಂಗಳೂರಿನ ಕಂಕನಾಡಿ ಗೋರಿಗುಡ್ಡದ ಎಸ್.ಎನ್.ಡಿ ಸಂಪತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಅಲ್ಲದೆ, ಪ್ರಕರಣದಲ್ಲಿ ಜಮೀನುಗಳ ಮಾಲೀಕರ ಹೆಸರಿನ ದಾಖಲೆಗಳನ್ನು ಪರಿಶೀಲಿಸದೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956ರ ಕಲಂ 3 (ಎ) ಮತ್ತು 3 (ಡಿ) ಅಡಿಯಲ್ಲಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಹೀಗಾಗಿ, ಕಲಂ 3(ಎ) ಮತ್ತು 3(ಡಿ) ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳು ಅರ್ಜಿದಾರರ ಭೂಮಿಗೆ ಅನ್ವಯಿಸುವುದಿಲ್ಲ ಮತ್ತು ಅವರು ಭೂಮಿಯನ್ನು ಬಳಸಲು ಸ್ವತಂತ್ರರಾಗಿದ್ದು, ಭೂಮಿಯನ್ನು ಹಿಂದಿರುಗಿಸಬೇಕು ಎಂದು ಪೀಠ ಹೇಳಿದೆ.