ಬೆಂಗಳೂರು:ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಮುಂದುವರಿದ ಸಮುದಾಯಗಳ ಒತ್ತಡಕ್ಕೆ ಮಣಿದು ವರದಿ ಕಡಗಣಿಸಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಸ್ವೀಕಾರ ಮಾಡುವುದಷ್ಟೇ ಅಲ್ಲದೇ ಆ ವರದಿಯನ್ನು ಸಚಿವ ಸಂಪುಟಕ್ಕೆ ತಂದು ಜನಾಭಿಪ್ರಾಯ ಹಾಗೂ ಚರ್ಚೆಗೆ ಬಿಡಬೇಕು. ಕೆಲ ಸಮುದಾಯಗಳ ನಾಯಕರು ಈ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರು ಅನುಭವಿ ರಾಜಕಾರಣಿ ಅವರು ಅನನುಭವಿ ರಾಜಕಾರಣಿ ರೀತಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹಿರಿಯ ಶಾಸಕರಾಗಿ ಸರ್ಕಾರದ ಸಮೀಕ್ಷಾ ವರದಿಯನ್ನು ಕಸದ ಬುಟ್ಟಿಯಲ್ಲಿರುವುದನ್ನು ತೆಗೆದುಕೊಂಡಿದ್ದಾರೆ ಎಂದಿದ್ದು, ಅವರ ಆಲೋಚನಾ ಮಟ್ಟ ಯಾವ ರೀತಿ ಇದೆ ಎನ್ನುವುದು ಗೊತ್ತಾಗಲಿದೆ. ಶಾಮನೂರು ಶಿವಶಂಕರಪ್ಪ ಇಷ್ಟೊಂದು ಕೀಳು ಮಟ್ಟಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ. ಆಕ್ಷೇಪಣೆ ಇದ್ದರೆ ವ್ಯಕ್ತಪಡಿಸಿ ಅದು ತಪ್ಪಲ್ಲ. ಯಾರಿಗಾದರೂ ಅನಾನುಕೂಲ ಆಗುವುದಿದ್ದರೆ ಆಕ್ಷೇಪಣೆ ವ್ಯಕ್ತಪಡಿಸಲಿ, ವರದಿ ಈಗಷ್ಟೇ ಬಂದಿದೆ ಏನಾಗಿದೆ ಎಂದು ತಿಳಿದುಕೊಳ್ಳದೇ ಅದರ ಕತ್ತು ಹಿಸುಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರ 4 ಪರ್ಸೆಂಟ್ ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿಕೆ ಮಾಡಿತು. ಆದರೆ, ನಾವು ಸಂವಿಧಾನಾತ್ಮಕವಾಗಿ ಪ್ರಜಾಸತಾತ್ಮಕವಾಗಿ ನಮ್ಮ ಹಕ್ಕು ಕೇಳುತ್ತೇವೆ. ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ಸಚಿವರು ಅವರು ಸಮುದಾಯದ ಹಿತ ಕಾಪಾಡಬೇಕು. ಈಗಾಗಲೇ ಹಲವು ವರದಿಗಳು ಧೂಳು ತಿನ್ನುತ್ತಿವೆ. ಅದರಂತೆ ಈ ವರದಿಯೂ ಆಗಲು ಅವಕಾಶ ನೀಡಲ್ಲ ಎಂದು ತಿಳಿಸಿದರು.
ಇಡೀ ರಾಜ್ಯಾದ್ಯಂತ ಸಮುದಾಯಗಳು ಪ್ರಶ್ನೆ ಮಾಡುವ, ಪ್ರಶ್ನೆ ಕೇಳುವ ತಾಕತ್ತನ್ನು ಬೆಳೆಸಿಕೊಂಡಿವೆ. ಹೀಗಾಗಿ ಸರ್ಕಾರದ ಸಚಿವರು ಗಂಭೀರವಾಗಿ ಆಲೋಚನೆ ಮಾಡಬೇಕು. ವರದಿ ಕುರಿತು ಚರ್ಚೆಯಾಗಲಿ, ಲೋಪದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ, ವರದಿ ಬಗ್ಗೆ ತೀರಾ ಹಗುರವಾಗಿ ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಇಲ್ಲದಿದ್ದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಅವರು ಇದುವರೆಗೆ ಪಡೆದುಕೊಂಡಿರುವ ಸವಲತ್ತು ಎಲ್ಲಿಂದ ಬಂತು ಚರ್ಚೆ ಆಗಲಿ ಎಂದು ಆಗ್ರಹಿಸಿದರು.
ಜಾತಿ ಗಣತಿ ವರದಿ ಅನುಷ್ಠಾನಕ್ಕೆ ತನ್ನಿ:ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ ಎಂ ರಾಮಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ನೇಮಕವಾದ ಎಲ್ಲ ಆಯೋಗಗಳ ವರದಿಯನ್ನು ವಿರೋಧ ಮಾಡಿಕೊಂಡು ಬಂದಿರುವ ಜನ ಇವರು, ಹಿಂದುಳಿದ ಜಾತಿಗಳಿಗೆ ಸಿಗಬೇಕಾದ ಸರ್ಕಾರದ ಕಾರ್ಯಕ್ರಮ ರೂಪಿಸದ ಇವರು ನಮಗೆ ದ್ರೋಹ ಮಾಡಿ ನಮ್ಮ ಪಾಲನ್ನು ನಮ್ಮ ತಟ್ಟೆಯಲ್ಲಿರುವ ಅನ್ನವನ್ನು ಕಸಿದುಕೊಂಡು ತಿನ್ನುವ ಸ್ಥಿತಿಯಲ್ಲಿದ್ದೇವೆ. ಈ ವರದಿಯಲ್ಲಿ ನಮಗೆ ಏನು ಶಿಫಾರಸು ಮಾಡಿದ್ದಾರೋ ಅದನ್ನು ಕೊಡಬೇಕು. ಆದರೆ, ಚರ್ಚೆಗೆ ಬಿಡಿ, ವಿಧಾನಸೌಧ, ಸಂಪುಟ, ಜನರ ಮುಂದೆ ಚರ್ಚೆಗೆ ಇಡಿ, ನಂತರ ಜಾತಿ ಗಣತಿ ವರದಿ ಅನುಷ್ಠಾನಕ್ಕೆ ತನ್ನಿ, ವರದಿ ಶಿಫಾರಸು ಅನುಷ್ಠಾನಕ್ಕೆ ತರಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಅನುಷ್ಠಾನ ಆಗುವವರೆಗೆ ನಿದ್ದೆ ಮಾಡಲ್ಲ:ಮೂರು ಜಾತಿ ಸೇರಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಹೇಳಿದ್ದಾರೆ, ಅವರು ಇರುವುದು ಶೇ.25-30 ಮಾತ್ರ ನಾವು 70 ಪರ್ಸೆಂಟ್ ಇದ್ದೇವೆ, 4-5 ಕೋಟಿ ಜನ ನಾವಿದ್ದೇವೆ, ನಾವು ಅವರಿಗೆ ಎಚ್ಚರಿಕೆ ಕೊಡಲಿದ್ದೇವೆ. ಈ ಶಿಫಾರಸು ಸರ್ಕಾರ ಅನುಷ್ಟಾನಗೊಳಿಸಲಿಲ್ಲ ಎಂದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಿದ್ದೇವೆ. ಅನುಷ್ಠಾನ ಆಗುವವರೆಗೆ ನಿದ್ದೆ ಮಾಡಲ್ಲ, ವರದಿ ವಿರೋಧಿಸುವವರು ಹೋರಾಟಕ್ಕೆ ಬಂದಿದ್ದೇ ಆದಲ್ಲಿ ನಾವು ಕೈಗೆ ಬಳೆ ಹಾಕಿಕೊಂಡಿಲ್ಲ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ, ಈಗಲೂ ನಮಗೆ ಮೋಸ ಮಾಡಲು ಬಂದರೆ ಅದಕ್ಕೆ ಬಿಡಲ್ಲ, ವರದಿ ಶಿಫಾರಸು ಎಲ್ಲವನ್ನೂ ಅನುಷ್ಠಾನ ಮಾಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದು ತಿಳಿಸಿದರು.
ಇದನ್ನೂಓದಿ:ಜಾತಿ ಗಣತಿ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ, ಸಂಪುಟ ಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ: ಗೃಹ ಸಚಿವ