ಕರ್ನಾಟಕ

karnataka

ETV Bharat / state

ಮದುವೆ ಭರವಸೆ ನೀಡಿ ಮಾತು ಉಲ್ಲಂಘಿಸಿದರೆ ಅತ್ಯಾಚಾರ ಕೇಸ್​ನಲ್ಲಿ ಅಪರಾಧವಾಗದು: ಹೈಕೋರ್ಟ್ - high court

ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡಿ, ಬಳಿಕ ಅದನ್ನು ಉಲ್ಲಂಘಿಸಿದರೆ ಅತ್ಯಾಚಾರ ಆರೋಪದಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Jun 11, 2024, 3:13 PM IST

Updated : Jun 11, 2024, 4:57 PM IST

ಬೆಂಗಳೂರು: ವಿವಾಹವಾಗುವುದಾಗಿ ಭರವಸೆ ನೀಡಿ ಉಲ್ಲಂಘಿಸಿದ ಪ್ರಕರಣವನ್ನು ಅತ್ಯಾಚಾರ ಆರೋಪದಲ್ಲಿ ವಿಚಾರಣೆಗೆ ಒಳಪಡಿಸುವುದು ಅವಿವೇಕತನವಾಗಲಿದೆ. ವಿವಾಹವಾಗುವುದಾಗಿ ಸುಳ್ಳು ಭರವಸೆ ನೀಡುವುದು ಅತ್ಯಾಚಾರ ಪ್ರಕರಣದಡಿ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಅಮೆರಿಕದಲ್ಲಿ ನೆಲೆಸಿರುವ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಸಂತೋಷ್ ಶೆಟ್ಟಿ ವಿರುದ್ಧ ಅತ್ಯಾಚಾರ, ಮತ್ತವರ ಕುಟುಂಬದವರ ವಿರುದ್ಧ ವಂಚನೆ ಆರೋಪದಲ್ಲಿ ಕುಂದಾಪುರ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಸಂತೋಷ್ ಶೆಟ್ಟಿ ವಿದೇಶಕ್ಕೆ ತೆರಳಿದ ಬಳಿಕ ದೂರುದಾರ ಮಹಿಳೆಯೊಂದಿಗೆ ಹಲವು ದಿನಗಳ ಕಾಲ ವಾಟ್ಸ್​ಆ್ಯಪ್​ ಸಂಭಾಷಣೆ ನಡೆಸಿದ್ದಾರೆ. ಆದರೆ, ಎಲ್ಲಿಯೂ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿಲ್ಲ. ದೂರುದಾರರು ಮತ್ತು ಅರ್ಜಿದಾರರ ನಡುವೆ ಹಲವು ವ್ಯತ್ಯಾಸಗಳು ಕಂಡುಬಂದಿದ್ದು, ಇದೇ ಕಾರಣದಿಂದ ನಿಶ್ಚಿತಾರ್ಥವೂ ಮುರಿದು ಬಿದ್ದಿರುತ್ತದೆ. ಪ್ರಕರಣದಲ್ಲಿ ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿಲ್ಲ. ಮದುವೆಯಾಗುವುದಾಗಿ ತಿಳಿಸಿದ್ದು, ಮುಂದಿನ ಪ್ರಕ್ರಿಯೆಗಳನ್ನು ಮುಂದುವರೆಸಲಾಗಿದೆ. ಕಾರಣಾಂತರಗಳಿಂದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ. ವಿವಾಹ ಕಾರಣಾಂತರದಿಂದ ಮುರಿದು ಬಿದ್ದಿದೆ.

ಆದರೆ, ಅರ್ಜಿದಾರರ ಕುಟುಂಬ ದೂರುದಾರರಿಗೆ ಯಾವುದೇ ರೀತಿಯಲ್ಲಿಯೂ ಆಮಿಷ ನೀಡಿಲ್ಲ. ಮದುವೆಗೂ ಮುನ್ನ ಆಗಿರುವ ನಿಶ್ಚಿತಾರ್ಥವೂ ಮುರಿದುಬಿದ್ದ ಪರಿಣಾಮ ವಿವಾಹ ರದ್ದಾಗಿದೆ. ಆದ್ದರಿಂದ ಈ ಪ್ರಕರಣ ವಂಚನೆ ಆರೋಪದಲ್ಲಿಯೂ ಬರುವುದಿಲ್ಲ. ಹೀಗಾಗಿ ಈ ಪ್ರಕರಣ ಮುಂದುವರೆಕೆಗೆ ಅವಕಾಶ ನೀಡಿದ್ದಲ್ಲಿ ಕಾನೂನಿನ ದುರುಪಯೋಗವಾಗಲಿದೆ ಎಂದು ತಿಳಿಸಿರುವ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಏನಿದು ಪ್ರಕರಣ?: ಅಮೆರಿಕದ ನ್ಯೂಜೆರ್ಸಿಯಲ್ಲಿ ರಾಯಲ್ ಕೆರಾಬಿಯಾಮ್ ಗ್ರೂಪ್ ಇಂಟರ್ ನ್ಯಾಷನಲ್ ಶಿಪ್ಪಿಂಗ್ ಕಂಪನಿಯಲ್ಲಿ ಮೇಲ್ವಿಚಾರಕಾಗಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಶೆಟ್ಟಿ ಎಂಬುವರು ಶೆಟ್ಟಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತಮ್ಮ ವಿವರವನ್ನು ಸಲ್ಲಿಸಿದ್ದರು. ನಂತರ ಅವರ ಸಂಪರ್ಕಕ್ಕೆ ಕುಂದಾಪುರ ತಾಲೂಕಿನ ಮಹಿಳೆಯೊಬ್ಬರು ಬಂದಿದ್ದು, ಇಬ್ಬರೂ ಮಾತುಕತೆ ಮುಂದುವರೆಸಿದ್ದರು. 2023ರ ಜನವರಿ 8 ರಂದು ಹಕ್ಲಾಡಿಯ ದೇವಾಲಯದಲ್ಲಿ ಭೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಬಳಿಕ ಅರ್ಜಿದಾರರು ಮತ್ತು ದೂರುದಾರರ ಕುಟುಂಬದ ನಡುವೆ ಮಾತುಕತೆಗಳು ನಡೆದಿದ್ದು, ಮದುವೆಯ ಪ್ರಸ್ತಾಪ ಬಂದು ಎರಡೂ ಕುಟಂಬಗಳ ಸದಸ್ಯರು ಒಪ್ಪಿ 2023 ರ ಜನವರಿ 11 ರಂದು ನಿಶ್ಚಿತಾರ್ಥ ಕಾರ್ಯಕ್ರಮವನ್ನು ನಡೆಸಿದ್ದರು.

2023 ರ ಜನವರಿ 11 ರಂದು ದೂರುದಾರರು ಹಣ ಗಳಿಸುವ ನಿಧಿಯಲ್ಲಿ ಹೂಡಿಕೆ ಮಾಡಲು 4 ಲಕ್ಷ ರು.ಗಳನ್ನು ನೀಡುವಂತೆ ಕೇಳಿದ್ದರು. ಇದಕ್ಕೆ ಅರ್ಜಿದಾದರು ತಕ್ಷಣ ವರ್ಗಾವಣೆ ಮಾಡಿದ್ದರು. ಬಳಿಕ 2023 ರ ಜನವರಿ 1 ರಂದು ಅರ್ಜಿದಾರರು ನ್ಯೂಜೆರ್ಸಿಗೆ ಹಿಂದಿರುಗಿದರು. ಕುಟುಂಬಗಳ ಏಳು ತಿಂಗಳ ಕಾಲ ಮಾತುಕತೆ ಮುಂದುವರೆದಿತ್ತು. ಅರ್ಜಿದಾರರ ಕುಟುಂಬದ ಸದಸ್ಯರ ಭರವಸೆ ನಂಬಿ ವಿವಾಹಕ್ಕೆ ಆಹ್ವಾನ ಪತ್ರಗಳನ್ನು ಮುದ್ರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥವು ಮುರಿದು ಬಿದ್ದಿತ್ತು. ಮದುವೆ ನಿಶ್ಚಯವೂ ರದ್ದಾಗಿತ್ತು.

ಇದಾದ ಬಳಿಕ( ಏಳು ತಿಂಗಳ ನಂತರ)ಮಹಿಳೆ ಕುಂದಾಪುರ ಪೊಲೀಸರಿಗೆ ದೂರು ನೀಡಿ, ಸಂತೋಷ್ ಶೆಟ್ಟಿ ನಿಶ್ಚಿತಾರ್ಥದ ದಿನ ಸಂಜೆ ಆರು ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನನ್ನಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಅತ್ಯಾಚಾರ ಆರೋಪದಲ್ಲಿ ದೂರು ದಾಖಲಿಸಿದ್ದರು.

ಅಲ್ಲದೆ, ಸಂತೋಷ್ ಶೆಟ್ಟಿ ಕುಟುಂಬಸ್ಥರ ವಿರುದ್ಧ ಸಂತೋಷ್ ಶೆಟ್ಟಿಯೊಂದಿಗೆ ವಿವಾಹ ಮಾಡುವುದಾಗಿ ಭರವಸೆ ನೀಡಿ ಬಳಿಕ ನಿರಾಕರಿಸಿದ್ದಾರೆ ಎಂದು ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ:CBSC ನಿರಾಕ್ಷೇಪಣಾ ಪತ್ರಕ್ಕೆ ಲೆಕ್ಕ ಪರಿಶೋಧನಾ ಪತ್ರ ಕಡ್ಡಾಯ ಮಾಡದಂತೆ ಕೋರಿ ಅರ್ಜಿ: ಮನವಿ ಪರಿಗಣಿಸಲು ಹೈಕೋರ್ಟ್ ಸೂಚನೆ - High Court instructs

Last Updated : Jun 11, 2024, 4:57 PM IST

ABOUT THE AUTHOR

...view details