ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ವ್ಯಾಪಕ ಮಳೆ: ಕೃತಕ ನೆರೆಗೆ ಮುಳುಗಿದ ಇಡೂರು ಗ್ರಾಮ! - Heavy Rain in Karwar - HEAVY RAIN IN KARWAR

ಧಾರಾಕಾರ ಮಳೆಯಿಂದಾಗಿ ಕಾರವಾರದಲ್ಲಿ ಕೃತಕ ನೆರೆ ಉಂಟಾಗಿದ್ದು, ಇಡೂರು ಗ್ರಾಮ ಮುಳುಗಡೆಯಾಗಿದೆ.

idur village
ಇಡೂರು ಗ್ರಾಮ (ETV Bharat)

By ETV Bharat Karnataka Team

Published : Jul 15, 2024, 9:36 AM IST

ಕೃತಕ ನೆರೆಗೆ ಮುಳುಗಿದ ಇಡೂರು ಗ್ರಾಮ (ETV Bharat)

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಮುಂದುವರೆದಿದೆ. ವರುಣನ ಅಬ್ಬರದಿಂದ ಹಲವೆಡೆ ಹಾನಿ ಸಂಭವಿಸುತ್ತಿದ್ದು, ಕಾರವಾರ ತಾಲೂಕಿನ ಇಡೂರಿನ ಮನೆಗಳಿಗೆ ನೀರು ನುಗ್ಗಿ ಗ್ರಾಮವೇ ಮುಳುಗಡೆಯಾಗುವಂತಾಗಿದೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಾರವಾರ ತಾಲೂಕಿನಲ್ಲಿಯೂ ಧಾರಾಕಾರ ಮಳೆಯಿಂದ ಚೆಂಡಿಯಾ ಬಳಿ ಇರುವ ಗುಡ್ಡದ ಪಕ್ಕದ ಇಡೂರು ಗ್ರಾಮಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈ ನೀರು ಸಮುದ್ರಕ್ಕೆ ಸೇರಲು ಇರುವ ಮಾರ್ಗದಲ್ಲಿಯೇ ನೌಕಾನೆಲೆಯ ಕಾಂಪೌಂಡ್ ಇದೆ. ಹೀಗಾಗಿ, ಮಳೆ ನೀರು ಮುಂದೆ ಹೋಗದೇ ಸಮಸ್ಯೆ ಉಂಟಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇಡೂರು ಗ್ರಾಮ (ETV Bharat)

ಗ್ರಾಮದ ಸುಮಾರು 25 ಮನೆಗಳು ಜಲಾವೃತವಾಗಿದೆ. ಪ್ರತಿ ವರ್ಷ ಇದೇ ರೀತಿ ಸಮಸ್ಯೆಯಾಗುತ್ತಿದ್ದು, ಕ್ರಮ ಕೈಗೊಳ್ಳಲು ಮಾತ್ರ ಯಾರೂ ಮುಂದಾಗುತ್ತಿಲ್ಲ. ಅಧಿಕಾರಿಗಳು ಪ್ರತಿ ಮಳೆಗಾಲದಲ್ಲೂ ನೆಪಮಾತ್ರಕ್ಕೆ ಸ್ಥಳಕ್ಕೆ ಬಂದು ತೆರಳುತ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ಕಲ್ಪಿಸದ ಕಾರಣ ಯಾವಾಗಲೂ ಸಮಸ್ಯೆಯಲ್ಲೇ ದಿನ‌ ಕಳೆಯಬೇಕಾದ ಸ್ಥಿತಿ ಇದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

ನೀರು ಸರಾಗವಾಗಿ ಸಮುದ್ರ ಸೇರಲಾಗದೆ, ಇಡೂರು ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಇದೇ ರೀತಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಮಳೆ ಹೆಚ್ಚಾದಾಗ ಗ್ರಾಮದಲ್ಲಿ ನೀರು ತುಂಬಿಕೊಳ್ಳುತ್ತದೆ. ನೌಕಾನೆಲೆಯವರು ಹಾಕಿರುವ ಕಾಂಪೌಂಡ್​​ಗಳಲ್ಲಿ ಮಳೆಗಾಲದಲ್ಲಿ ನೀರು ಸಾಗುವಂತೆ ವ್ಯವಸ್ಥೆ ಮಾಡಿದರೆ ಇಂತಹ ಸಮಸ್ಯೆ ಸೃಷ್ಟಿಯಾಗುವುದಿಲ್ಲ. ಆದರೆ ಯಾರೂ ಈ ಬಗ್ಗೆ ಪ್ರಶ್ನಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶ.

ಇಡೂರು ಗ್ರಾಮ (ETV Bharat)

ಇಡೂರು ಗ್ರಾಮ ಮಾತ್ರವಲ್ಲದೇ, ಕಾರವಾರ ತಾಲೂಕಿನ ಬಿಣಗಾ, ಚಂಡ್ಯಾ ಸೇರಿದಂತೆ ಹಲವು ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿದೆ. ಈ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ನೀರು ತುಂಬಿಕೊಂಡಿದೆ. ಕಳೆದ ಕೆಲ ವರ್ಷಗಳಿಂದ ಜನರು ಕೃಷಿ ಮಾಡುವುದನ್ನು ಕೂಡ ಬಿಟ್ಟಿದ್ದು, ಕೆಲವೆಡೆ ತರಕಾರಿ ಬೆಳೆಯುತ್ತಿದ್ದ ಪ್ರದೇಶದಲ್ಲಿಯೂ ನೀರು ನುಗ್ಗಿ ಹಾನಿಯಾಗಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಅಗತ್ಯ ಕ್ರಮ‌ ಕೈಗೊಳ್ಳಬೇಕು ಎಂದು ಸ್ಥಳೀಯರಾದ ವೈಶಾಲಿ ಆಗ್ರಹಿಸಿದರು.

ಇಡೂರು ಗ್ರಾಮ (ETV Bharat)

ಉತ್ತರ ಕನ್ನಡದ ಶಾಲೆಗೆ ರಜೆ:ಹವಾಮಾನ ಇಲಾಖೆಯು ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ರೆಡ್​ ಅಲರ್ಟ್​ ಘೋಷಿಸಿದೆ. ಹೀಗಾಗಿ, ಜಿಲ್ಲೆಯ ಮುಂಡಗೋಡ ಹಾಗೂ ಹಳಿಯಾಳ ತಾಲೂಕುಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:ಭಾರಿ ಮಳೆ: ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಶಾಲಾ - ಕಾಲೇಜುಗಳಿಗೆ ಇಂದು ರಜೆ - Rain Holiday For Schools

ABOUT THE AUTHOR

...view details