ಬೆಂಗಳೂರು:ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ದಿನಸಿ ಮಳಿಗೆಯೊಂದರ ನೆಲಮಹಡಿಯಲ್ಲಿ ಕಳೆದ ವರ್ಷ ಡಿಸೆಂಬರ್ 24ರಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಅದು ಕುಖ್ಯಾತ ಕಳ್ಳನ ಮೃತದೇಹ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಹತ್ಯೆಯಾದ ರೀತಿ ಪತ್ತೆಯಾಗಿದ್ದ ಶವವು ಕೇರಳದ ಕುಖ್ಯಾತ ಖದೀಮ ವಿಷ್ಣು ಪ್ರಶಾಂತ್ ಎಂಬಾತನದ್ದು ಎಂದು ಗುರುತಿಸಲಾಗಿದೆ. ಈತನ ಹಿನ್ನೆಲೆಯನ್ನು ಕೆದಕಿದಾಗ ಆತ ಕೇರಳ, ತಮಿಳುನಾಡಿನಲ್ಲಿ ಸುಮಾರು 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಕೋಣನಕುಂಟೆ ಪೊಲೀಸರು ಕಂಡುಕೊಂಡಿದ್ದಾರೆ.
ಕೈ ಮೇಲಿದ್ದ ಟ್ಯಾಟು ನೀಡಿದ ಸುಳಿವು:ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೇರಳ ಪೊಲೀಸರಿಂದ ವಿಷ್ಣು ಬಂಧಿತನಾಗಿದ್ದ. ಒಂದು ವರ್ಷ ಜೈಲಿನಲ್ಲಿದ್ದು ಬಳಿಕ ಜಾಮೀನಿನ ಮೇರೆಗೆ ಹೊರ ಬಂದು ಕಳ್ಳತನ ಕಾಯಕ ಮುಂದುವರೆಸಿದ್ದ. ಬಂಧನ ಭೀತಿಯಿಂದ ಕೇರಳದಿಂದ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಡಿ.24ರಂದು ಕೋಣನಕುಂಟೆ ಕ್ರಾಸ್ ಬಳಿಯಿರುವ ಬ್ರ್ಯಾಂಡ್ ಫ್ಯಾಷನ್ ಮಳಿಗೆಯ ನೆಲಮಹಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಮೃತನ ಜೇಬಿನಲ್ಲಿ ಕದ್ದ ಮೊಬೈಲ್ ಪತ್ತೆಯಾಗಿತ್ತು. ಅಸಲಿ ಮಾಲೀಕರಿಗೆ ಪೋನ್ ಮಾಡಿದಾಗ ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಹೇಳಿದ್ದರು. ಮೃತನ ಕೈ ಮೇಲಿದ್ದ ಟ್ಯಾಟು ಹಾಗೂ ಮೃತನ ಭಾವಚಿತ್ರ ಸಮೇತ ಕೇರಳ ಪೊಲೀಸರಿಗೆ ಕಳುಹಿಸಿದಾಗ ಕುಖ್ಯಾತ ಖದೀಮವೆಂಬುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.