ಮಂಗಳೂರು: ಜೆರೋಸಾ ಶಾಲೆಯ ಶಿಕ್ಷಕಿ ತರಗತಿಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ಧಾರ್ಮಿಕ ನಿಂದನೆ ಮಾಡಿದ್ದಾರೆ ಎನ್ನಲಾದ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಹುಚರ್ಚಿತ ವಿಷಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಘಟನೆಯ ನಂತರ ಆದ ಬೆಳವಣಿಗೆ ಕುರಿತು ವಿಶೇಷ ತನಿಖೆ ನಡೆಸಲು ಐಎಎಸ್ ಅಧಿಕಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಅಪರ ಆಯುಕ್ತ ಆಕಾಶ್ ಶಂಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ''ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಅವರು ನಡೆದುಕೊಂಡ ರೀತಿಯಿಂದ ಜಿಲ್ಲೆಯ ಜನ ತಲೆತಗ್ಗಿಸುವಂತೆ ಆಗಿದೆ. ಮಕ್ಕಳನ್ನು, ಶಿಕ್ಷಕರನ್ನು ಬೀದಿಯಲ್ಲಿ ನಿಲ್ಲಿಸಿರುವುದು ಒಳ್ಳೆಯದಲ್ಲ. ಎಫ್ಐಆರ್ ಹಿಂತೆಗೆಯಲು ಆಗಲ್ಲ. ದೂರಿನ ಬಗ್ಗೆ ತನಿಖೆ ಆಗುತ್ತದೆ. ತಪ್ಪು ಸಾಬೀತಾದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಶಿಕ್ಷಕಿಯ ವಿರುದ್ಧವೂ ಶಿಕ್ಷಣ ಇಲಾಖೆ ತನಿಖೆ ಮಾಡುತ್ತದೆ. ಈ ತನಿಖೆಯನ್ನು ಪೊಲೀಸರು ಮಾಡುವುದಕ್ಕೆ ಆಗಲ್ಲ. ಹಾಗಾಗಿ ಎಫ್ಐಆರ್ ದಾಖಲು ಮಾಡಿಲ್ಲ. ಯಾರು ತಪ್ಪು ಮಾಡಿದರೂ ತನಿಖೆಯಲ್ಲಿ ತಿಳಿದು ಬರುತ್ತದೆ'' ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಪ್ರಕರಣದ ಹಿನ್ನೆಲೆ ಏನು:ಮಂಗಳೂರಿನ ಜೆಪ್ಪುವಿನಲ್ಲಿರುವ ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬುವರು ತರಗತಿಯಲ್ಲಿ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಫೆ.10ರ ಶನಿವಾರ ಪೋಷಕರು ಶಾಲಾ ಗೇಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಫೆ.12 ರಂದು ಕೆಲ ಸಂಘಟನೆಗಳ ಕಾರ್ಯಕರ್ತರು ಶಿಕ್ಷಣ ಸಂಸ್ಥೆ ಮುಂದೆ ಜಮಾಯಿಸಿ ಶಿಕ್ಷಕಿಯ ಅಮಾನತಿಗೆ ಆಗ್ರಹಿಸಿದ್ದರು. ಸಂಜೆಯ ವೇಳೆಗೆ ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಒಂದು ಗಂಟೆ ಕಾಲ ಮಾತುಕತೆ ನಡೆಸಿದ್ದರು. ಆ ಬಳಿಕ ಮುಖ್ಯ ಶಿಕ್ಷಕಿ ಅನಿತಾ ಎಂಬುವವರು ಸಿಸ್ಟರ್ ಪ್ರಭಾರನ್ನು ವಜಾಗೊಳಿಸಿದ್ದರು.