ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿಬಿ ವಿನಯ್ ಕುಮಾರ್ ದಾವಣಗೆರೆ:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ತಿಳಿಸಿದ್ದೇನೆ. ಇದೇ ನನ್ನ ಅಂತಿಮ ನಿರ್ಧಾರ. 18ಕ್ಕೆ ನಾಮಪತ್ರ ಸಲ್ಲಿಸುವೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದಾವಣಗೆರೆ ರಾಜಕೀಯ ಬಂಡವಾಳ ಸಾಮ್ರಾಜ್ಯವಾಗಿದ್ದು, ಎರಡು ಕುಟುಂಬಗಳಗೆ ಮಾತ್ರ ಸೀಮಿತವಾಗಿದೆ. ಕಳೆದ 30-40 ವರ್ಷಗಳಿಂದ ಈ ಎರಡು ಕುಟುಂಬಗಳು ಅಧಿಕಾರ ನಡೆಸಿಕೊಂಡು ಬರುತ್ತಿವೆ. ದಾವಣಗೆರೆ ಉತ್ತರ ಕ್ಷೇತ್ರ ಹಾಗೂ ದಕ್ಷಿಣ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅಸಮಾನತೆ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಷ್ಟೇ ಅಲ್ಲದೇ ಪ್ರಾದೇಶಿಕ ಮತ್ತು ರಾಜಕೀಯ ವಲಯದಲ್ಲೂ ಅಸಮಾನತೆ ಹೊಂದಿರುವ ಕ್ಷೇತ್ರ ದಾವಣಗೆರೆ ಎಂದರು.
30-35 ವರ್ಷಗಳಿಂದ ಜನರಿಗೆ ಎರಡೇ ಆಯ್ಕೆಗಳಿದ್ದವು. ಅದರೆ, ಮೂರನೇ ಆಯ್ಕೆಯೇ ಇರಲಿಲ್ಲ. ರಾಜಕೀಯ ಪಕ್ಷಗಳು ನಮ್ಮಂತವರಿಗೆ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿವೆ. ಪಕ್ಷಗಳು ಟಿಕೆಟ್ ಮತ್ತು ಅವಕಾಶ ಕೊಡದೇ ಇದ್ದಾಗ ಏನು ಮಾಡಬೇಕು? ದಾವಣಗೆರೆ ಕ್ಷೇತ್ರದ ಜನತೆ ಪಕ್ಷಾತೀತವಾಗಿ ವಿನಯ್ ಕುಮಾರ್ ಬಗ್ಗೆ ಒಲವಿಟ್ಟುಕೊಂಡಿದ್ದಾರೆ. ಪ್ರತಿ ಹಳ್ಳಿಗಳಲ್ಲೂ ಅಪಾರ ಜನ ಬೆಂಬಲ ಇದೆ. ಪಕ್ಷೇತರನಾಗಿ ಗೆಲ್ಲುವ ವಿಶ್ವಾಸವಿದೆ. ನನ್ನ ನಿರ್ಧಾರ ಮುಂದಿನ ಪೀಳಿಗೆಯ ಜನರಿಗೆ ಪ್ರೇರಣೆ ಆಗಲಿ ಎಂಬ ಉದ್ದೇಶದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿದ್ದೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಧಾರವಾಡದಲ್ಲಿ ಜೋಶಿ Vs ದಿಂಗಾಲೇಶ್ವರ ಶ್ರೀ: ಎರಡನೇ ಸಲ ಮಠಾಧೀಶರು ಕಣಕ್ಕೆ; ಲಿಂಗಾಯತ ಮತದಾರರ ಒಲವು ಯಾರತ್ತ? - Dharwad Constituency