ಮಂಡ್ಯ: ಅನಾರೋಗ್ಯದ ನಡುವೆಯೂ ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಇಂದು ಬಿಡುವು ಮಾಡಿಕೊಂಡು ಮಂಡ್ಯದ ಪಾಂಡವಪುರಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, "ಇದು ದೇವೇಗೌಡನ ಹುಟ್ಟುಗುಣ. ಶರೀರದ ಕೊನೆ ಉಸಿರಿರೋವರೆಗೂ ರಾಜಕೀಯದಲ್ಲಿ ಹೋರಾಟ ಮಾಡುತ್ತೇನೆ" ಎಂದು ಹೇಳಿದರು.
ಪಾಂಡವಪುರ ತಾಲೂಕಿನ ಚಿನಕುರಳಿಯಲ್ಲಿ ಮಾತನಾಡಿದ ಅವರು, "ನಿವೃತ್ತಿ ಆಗುತ್ತೇನೆ ಎಂದು ನಾನು ಎಂದಿಗೂ ಹೇಳಿಲ್ಲ. ನಿಖಿಲ್ ಕುಮಾರಸ್ವಾಮಿಗಾಗಿ ಹೋರಾಟ ಮಾಡುತ್ತಿದ್ದೇನೆ. ಮುಂದಿನ ಚುನಾವಣೆಗಳಲ್ಲೂ ಹೋರಾಟ ಮಾಡುತ್ತೇನೆ. ಸುಮ್ಮನೆ ಮನೆಯಲ್ಲಿ ಮಲಗುವುದಿಲ್ಲ" ಎಂದು ಗುಟುರು ಹಾಕಿದರು.
ಮಾಜಿ ಪ್ರಧಾನಿ ಹೆಚ್.ಡಿ.ಕುಮಾರಸ್ವಾಮಿ (ETV Bharat) ಡಿಕೆಶಿ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ?:"ಡಿ.ಕೆ. ಶಿವಕುಮಾರ್ ಯಾವತ್ತಾದ್ರೂ ಕಣ್ಣೀರು ಹಾಕಿರೋದು ನೋಡಿದ್ದೀರಾ? ಕೊತ್ವಾಲ್ ರಾಮಚಂದ್ರನಿಂದ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಡಿಕೆಶಿ. ಜವಾಹರ್‌ಲಾಲ್ ನೆಹರು, ಇಂದಿರಾಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ?" ಎಂದು ಪ್ರಶ್ನಿಸಿದರು.
ನೋವಾದಾಗ ಹೃದಯ ಮರಗುತ್ತೆ, ಕಣ್ಣೀರು ಬರುತ್ತೆ:"ದೇವೇಗೌಡ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತಹವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದ್ದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ನೋವು ಇದೆ. ಯಾರು ಹೇಮಾವತಿ, ಹಾರಂಗಿ ಕಟ್ಟಿದ್ದು? ಚನ್ನಪಟ್ಟಣದಲ್ಲಿ ಈಗ ಚರ್ಚೆ ಮಾಡ್ತಾರೆ. ಮಾತಾಡೋಕೆ ತುಂಬಾ ವಿಚಾರಗಳು ಇವೆ" ಎಂದರು.
ಡಿಕೆಶಿಗೆ ಹೆಚ್ಡಿಕೆ ಹೋಲಿಕೆ ಮಾಡಬೇಡಿ:ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ಈಗ ಡಿ.ಕೆ.ಶಿವಕುಮಾರ್ ಬೆಂಗಳೂರಿಗೆ ಸೇರಿಸ್ತೀನಿ, ಜನರಿಗೆ ಅನುಕೂಲ ಅಂತಿದ್ದಾರೆ. ಡಿಕೆಶಿಯನ್ನು ಹೆಚ್ಡಿಕೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ, ಕುಮಾರಸ್ವಾಮಿಯನ್ನು ಕರೆದು ರಾಷ್ಟ್ರದ ಎರಡು ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಅಂತಹ ವ್ಯಕ್ತಿತ್ವವನ್ನು ಕುಮಾರಸ್ವಾಮಿ ಬೆಳೆಸಿಕೊಂಡಿದ್ದಾನೆ. ಮಂಡ್ಯ ಜಿಲ್ಲೆಯ ಮಹಾಜನತೆ ಹಣ ಹಾಕಿ ಹೆಚ್ಡಿಕೆ ಗೆಲುವಿಗೆ ದುಡಿದ್ರು. ಕುಮಾರಸ್ವಾಮಿಯನ್ನು ಸೋಲಿಸಲು ಎದುರಾಳಿಗಳು ಕಂಟ್ರಾಕ್ಟರ್ಗೆ 120 ಕೋಟಿ ರೂ. ಹಣವನ್ನು ರಿಲೀಸ್ ಮಾಡ್ತಾರೆ. ವಾಲ್ಮೀಕಿ ಸಮಾಜದ 80 ಕೋಟಿ ತೆಗೆದುಕೊಂಡು ತೆಲಂಗಾಣ ಎಲೆಕ್ಷನ್ಗೆ ಖರ್ಚು ಮಾಡಿದ್ರು. ನನಗೆ 92 ವರ್ಷ, ಮೊಮ್ಮಗ ನಿಖಿಲ್ ಗೆದ್ದ ಬಳಿಕ ಮಲಗಲ್ಲ. ಈ ಸರ್ಕಾರವನ್ನು ತೆಗೆಯುವವರೆಗೂ ಮಲಗಲ್ಲ. 62 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ನೋಡಿಲ್ಲ. ಈ ರಾಜ್ಯ ಉಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ" ಎಂದರು.
ಒಟ್ಟಾರೆ, ಈ ಇಳಿ ವಯಸ್ಸಿನಲ್ಲೂ ರಾಜಕಾರಣದಲ್ಲೇ ಉಳಿಯುತ್ತೇನೆ ಎನ್ನುವ ದೊಡ್ಡ ಗೌಡರು, ಏನೇ ಆಗ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಗೆದ್ದೇ ಗೆಲ್ಲುಸುತ್ತೇನೆ ಎಂದು ಶಪಥ ಮಾಡಿದ್ದಾರೆ.
ಇದನ್ನೂ ಓದಿ:ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿಯಿಂದ ಒಪ್ಪಿಗೆ ಕೊಡಿಸುವೆ: ಹೆಚ್.ಡಿ.ದೇವೇಗೌಡ