ಶಿವಮೊಗ್ಗ: ನಾನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ. ಶಿವಮೊಗ್ಗ ನಗರದ ಬಂಜಾರ್ ಭವನದಲ್ಲಿ ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಮಾತನಾಡಿದ ಅವರು, ನಾಳೆ ಚುನಾವಣಾ ವೇಳಾಪಟ್ಟಿ ಘೋಷಣೆಯಾಗುತ್ತದೆ. ನಾಳೆಯಿಂದ ನೀವು ಒಂದೂವರೆ ತಿಂಗಳು ನನ್ನ ಪರವಾಗಿ ದುಡಿಯಬೇಕು. ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ಅಂದು ಕೊಂಡಿರಲಿಲ್ಲ. ನಾನು ಸತ್ತರೂ ನರೇಂದ್ರ ಮೋದಿ ಅವರ ವಿರುದ್ಧ ಇರಲು ಸಾಧ್ಯವಿಲ್ಲ ಎಂದರು
ಇದು ಉದ್ವೇಗದ ತೀರ್ಮಾನ ಅಲ್ಲ, ಹಿಂದುತ್ವಕ್ಕೆ ಅನ್ಯಾಯ ಆಗಬಾರದು, ಒಂದೇ ಕುಟುಂಬದ ಕೈಯಲ್ಲಿ ಪಕ್ಷ ಇರಬಾರದು ಎಂದು ನೊಂದ ಸಾವಿರಾರು ಕಾರ್ಯಕರ್ತರ ದನಿಯಾಗಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನಾನು ಚುನಾವಣೆಗೆ ನಿಂತರೆ ಪಾರ್ಟಿ ಏನು ಮಾಡಬಹುದು ಒಂದು ನೋಟಿಸ್ ಕೊಡಬಹುದು, ಇಲ್ಲ ಉಚ್ಚಾಟನೆ ಮಾಡಬಹುದು. ನಾನು ಗೆದ್ದರೆ ಎರಡೇ ತಿಂಗಳಲ್ಲಿ ಪಕ್ಷ ನನ್ನನ್ನು ವಾಪಸ್ ಕರೆಯುತ್ತದೆ. ನಿಮ್ಮೆಲ್ಲರ ಬಯಕೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ ಎಂದು ಹೇಳಿದರು.
ಕಾಂತೇಶನಿಗೆ ಕೊಟ್ಟ ಮಾತು ಮರೆತು ಹೋಯಿತೆ?: ನನ್ನ ಮಗ ಕಾಂತೇಶ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿಗೆ ಪಡೆದುಕೊಂಡು ಪ್ರಚಾರ ಮಾಡಿದ್ದರು. ಆದರೆ, ಈಗ ಟಿಕೆಟ್ ಇಲ್ಲ ಎಂದು ಹೇಳಿದರೆ ಹೇಗೆ?. ಈ ಹಿಂದೆ ಯಡಿಯೂರಪ್ಪ ಅವರು, ಕಾಂತೇಶ್ಗೆ ಟಿಕೆಟ್ ಕೊಡಿಸುವ ವಿಚಾರವಾಗಿ ಈಶ್ವರಪ್ಪ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿಸುತ್ತೇನೆ ಎಂದಿದ್ದರು. ನಂತರ ಯಡಿಯೂರಪ್ಪ ಚಿಕ್ಕಮಗಳೂರಿಗೆ ಹೋದಾಗ ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸಿ ಎಂದು ಹೇಳಿದ್ದರು, ಆದರೆ ಅವರಿಗೆ ಕಾಂತೇತ್ನಿಗೆ ಕೊಟ್ಟ ಮಾತು ಮರೆತು ಹೋಯಿತೆ ಎಂದು ಪ್ರಶ್ನಿಸಿದರು.