ಬೆಳಗಾವಿ:ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ. ಟಿ ರವಿ ಅವರು ಬಳಸಿರುವ ಮಾತುಗಳಿಂದ ತುಂಬಾ ನೊಂದಿದ್ದೇನೆ. ಸಿ. ಟಿ ರವಿ ವಿರುದ್ಧ ಕಾನೂನು ಸಮರ ಮುಂದುವರೆಸುತ್ತೇನೆ. ಅಲ್ಲದೇ, ಪ್ರಧಾನಮಂತ್ರಿ ಮತ್ತು ರಾಷ್ಟ್ರಪತಿಗಳಿಗೂ ಈ ಬಗ್ಗೆ ದೂರು ನೀಡುತ್ತೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಳೆದ ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. ಕಳೆದ 26 ವರ್ಷಗಳಿಂದ ಸಂಘರ್ಷದಿಂದ ಮೇಲೆ ಬಂದಿದ್ದೇನೆ. ನಾನೇನು ರೆಡ್ ಕಾರ್ಪೆಟ್ ಮೇಲೆ ಬಂದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಘಟನೆ ಬಳಿಕ ಸಿ. ಟಿ ರವಿ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ. ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ. ಸಿ. ಟಿ ರವಿ ವಿರುದ್ಧ ಹೋರಾಟ ಮುಂದುವರಿಸುವೆ. ಪೊಲೀಸ್ ತನಿಖೆ ಬೇಗ ಆಗಬೇಕು. ಎಫ್ಎಸ್ಎಲ್ ವರದಿ ಬೇಗ ಬಹಿರಂಗವಾಗಬೇಕು. ಇಂಥ ಸಂದರ್ಭದಲ್ಲೂ ಬಿಜೆಪಿಯವರು ಸಿ. ಟಿ ರವಿ ಬೆನ್ನಿಗೆ ನಿಂತಿದ್ದಾರೆ ಎಂದು ಸಚಿವೆ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.
ಸಿ. ಟಿ ರವಿ ಅವರಿಗೆ ಏನಾಗಿದೆ ಗಾಯ, ಎಷ್ಟಾಗಿದೆ ಗಾಯ? ಪೊಲೀಸರು ಎನ್ ಕೌಂಟರ್ ಮಾಡುತ್ತಿದ್ದರು ಅಂತಾರಲ್ಲಾ? ನಾಚಿಕೆ ಆಗಲ್ವ ನಿಮಗೆ? ಇಡೀ ಕರ್ನಾಟಕದ ಜನತೆ ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕೊ ಅದನ್ನು ಮಾಡಿದ್ದಾರೆ. ಪ್ರಕರಣದ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸಿ. ಟಿ ರವಿ ವಿರುದ್ಧ ಪ್ರಧಾನಿ, ರಾಷ್ಟ್ರಪತಿಗೂ ಪತ್ರ ಬರೆಯುತ್ತೇನೆ. ಸಾಧ್ಯವಾದರೆ ಭೇಟಿಯೂ ಆಗುತ್ತೇನೆ ಎಂದು ತಿಳಿಸಿದರು.