ಬೆಂಗಳೂರು: "ಝೀರೋ ಟ್ರಾಫಿಕ್ ಎಂದಿಗೂ ಬಯಸಿದವನಲ್ಲ. ಆದರೆ, ಪೊಲೀಸರು ನಾನು ಹೋಗುವಾಗ ದಾರಿ ಮಾಡಿಕೊಡುತ್ತಾರೆ ಅಷ್ಟೇ. ಗೃಹ ಸಚಿವರು ಸೇರಿ ಯಾವ ಸಚಿವರಿಗೂ ಝೀರೋ ಟ್ರಾಫಿಕ್ ಕಲ್ಪಿಸಿ ಎಂದು ಎಂದಿಗೂ ಸಂಚಾರ ಪೊಲೀಸರಿಗೆ ಹೇಳಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಸಿಎಂ, "ಬೆಂಗಳೂರಿನಂತಹ ಮಹಾನಗರಗಳಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಹಿರಿಯ ಸಂಚಾರ ಪೊಲೀಸರು ರಸ್ತೆಗಿಳಿದು ಕೆಲಸ ಮಾಡಬೇಕು. ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಹೀಗಾಗಿ ಝೀರೋ ಟ್ರಾಫಿಕ್ ಮಾಡುವಂತೆ ಹೇಳಿಲ್ಲ. ಆದರೆ ನಾನು ಹೋಗುವಾಗ ಸಂಚಾರ ಪೊಲೀಸರು ದಾರಿ ಮಾಡಿಕೊಡುತ್ತಾರೆ ಅಷ್ಟೇ" ಎಂದರು.
ಎರಡು ಒಂದೇ ಅಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, " ಝೀರೋ ಟ್ರಾಫಿಕ್ ಬೇರೆ. ದಾರಿ ಮಾಡಿಕೊಡುವುದು ಬೇರೆ. ಪ್ರಧಾನಿ ಬೆಂಗಳೂರಿಗೆ ಬಂದಾಗ ರಸ್ತೆ ಮಾರ್ಗದ ಎಲ್ಲ ವಾಹನಗಳನ್ನು ನಿಲ್ಲಿಸುವುದನ್ನು ಝೀರೋ ಟ್ರಾಫಿಕ್ ಅಂತಾರೆ. ಆದರೆ, ನಾನು ಕಾರಿನಲ್ಲಿ ಹೋಗುವಾಗ ಪೊಲೀಸರು ರೂಟ್ ಕ್ಲಿಯರ್ ಮಾಡಿಕೊಡುತ್ತಾರೆ ಇದು ಝೀರೋ ಟ್ರಾಫಿಕ್ ಅಲ್ಲ" ಎಂದು ಸಮರ್ಥಿಸಿಕೊಂಡ ಸಿದ್ದರಾಮಯ್ಯ, "ಗೃಹ ಸಚಿವರು ಸೇರಿದಂತೆ ಎಲ್ಲ ಸಚಿವರಿಗೂ ಝೀರೋ ಟ್ರಾಫಿಕ್ ನೀಡುವುದಕ್ಕೆ ಪೊಲೀಸರಿಗೆ ಸ್ಪಷ್ಟಪಡಿಸಿಲ್ಲ" ಎಂದರು.
ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸಲ್ಲ:"ಸಾರ್ವಜನಿಕರಿಗೆ ಸಮಾಜದಲ್ಲಿ ನಿರ್ಭಯವಾದ ವಾತಾವರಣ ನಿರ್ಮಾಣ ಮಾಡುವುದು ಪೊಲೀಸರ ಕರ್ತವ್ಯವಾಗಿದ್ದು, ಕರ್ತವ್ಯಲೋಪ ಅಥವಾ ಬೇಜವಾಬ್ದಾರಿತನದ ವರ್ತಿಸಿದರೆ ಸಹಿಸುವುದಿಲ್ಲ. ಸಾರ್ವಜನಿಕರ ರಕ್ಷಣೆಯ ಜವಾಬ್ದಾರಿ ಇರುವ ಪೊಲೀಸರು ಎಂದಿಗೂ ಸಹ ರಿಯಲ್ ಎಸ್ಟೇಟ್ ದಂಧೆಯವರೊಂದಿಗೆ ಸಹಭಾಗಿತ್ವ ಹೊಂದಬಾರದು. ಸ್ವತಃ ತಾವೇ ಸಹ ರಿಯಲ್ ಎಸ್ಟೇಟ್ ಕೆಲಸಗಳಲ್ಲಿ ತೊಡಗಬಾರದು. ಪೊಲೀಸ್ ಸಿಬ್ಬಂದಿ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ" ಎಂದರು.
"ರೌಡಿಸಂ, ಮಾದಕ ದಂಧೆ, ಜೂಜು, ಕಳ್ಳತನ, ದರೋಡೆ, ಕ್ಲಬ್ ದಂಧೆಗಳು ಸ್ಥಳೀಯ ಪೊಲೀಸರ ಗಮನಕ್ಕೆ ಬಾರದೇ ನಡೆಯುವುದಿಲ್ಲ. ಕೆಲವೆಡೆ ಪೊಲೀಸರೇ ಅಂತಹ ದಂಧೆಕೋರರೊಂದಿಗೆ ಶಾಮೀಲಾಗುತ್ತಿರುವುದು ಗಮನಕ್ಕೆ ಬಂದಿದೆ. ಪೊಲೀಸರು ಮನಸ್ಸು ಮಾಡಿದರೆ ಬಹುತೇಕ ಅಪರಾಧಗಳನ್ನು ತಡೆಯಲು ಸಾಧ್ಯವಿದೆ ಎಂಬುದು ಓರ್ವ ವಕೀಲನಾಗಿ ನನ್ನ ಅನುಭವದಿಂದ ಹೇಳುತ್ತೇನೆ. ಆದ್ದರಿಂದ ಐಜಿಪಿ, ಕಮಿಷನರ್, ಎಸ್.ಪಿ, ಡಿಸಿಪಿ ಮಟ್ಟದ ಅಧಿಕಾರಿಗಳು ಪ್ರತಿದಿನ ಕನಿಷ್ಠ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳೀಯ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಹಾಗೆ ಮಾಡುವುದರಿಂದ ಆಯಾ ಠಾಣಾ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವಿರುತ್ತದೆ" ಎಂದರು.