ರಾಜಕೀಯದ ಸವಾಲುಗಳನ್ನು ಅರಿತುಕೊಂಡೇ ಬಂದಿದ್ದೇನೆ: ಯದುವೀರ್ ಒಡೆಯರ್ ಮೈಸೂರು:ಕೇವಲ ಅವಕಾಶ ಸಿಕ್ಕಿದೆ ಎಂದು ನಾನು ರಾಜಕೀಯಕ್ಕೆ ಬಂದಿಲ್ಲ, ಅಭಿವೃದ್ಧಿ ಕೆಲಸವನ್ನು ಹಾಗೂ ಸಾಮಾಜಿಕ ಸಮಸ್ಯೆಯನ್ನು ರಾಜಕೀಯದ ಮೂಲಕ ಬಗೆಹರಿಸಲು ಸಾಧ್ಯ ಎಂದು ತಿಳಿದೇ ರಾಜಕಾರಣಕ್ಕೆ ಬಂದಿದ್ದೇನೆ. ಇಲ್ಲಿನ ಸವಾಲುಗಳ ಅರಿವು ನನಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಆದ ಬಳಿಕ ಮೊದಲ ಬಾರಿಗೆ ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಯದುವೀರ್ ಅವರನ್ನು ಸಾಂಪ್ರದಾಯಕವಾಗಿ ಸ್ವಾಗತಿಸಲಾಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯದುವೀರ್, ರಾಜಕಾರಣ ದೊಡ್ಡ ಸವಾಲು. ಇದನ್ನ ಗಮನದಲ್ಲಿಟ್ಟುಕೊಂಡೇ ಬಂದಿದ್ದೇನೆ.
ಸಾಂಬರಿನಲ್ಲಿ ಮೆಣಸಿನಕಾಯಿ ಸಿಕ್ಕಿದಂತೆ ರಾಜಕಾರಣದಲ್ಲೂ ಟೀಕೆಗಳು ಬರುತ್ತವೆ. ಆದರೆ, ಪ್ರತಿದಿನ ರಾಜಕಾರಣದಲ್ಲಿ ಟೀಕೆಗಳು ಹೆಚ್ಚಿರಬಹುದು. ಅದನ್ನ ಜೀರ್ಣಿಸಿಕೊಳ್ಳಬೇಕು ಹಾಗಾಗಿ ಎಲ್ಲದಕ್ಕೂ ಸಿದ್ಧನಾಗಿ ಬಂದಿದ್ದೇನೆ ಎಂದರು.
ಒಂದು ವರ್ಷ ಹಿಂದೆಯೇ ತೀರ್ಮಾನ ಮಾಡಿದ್ದೆ: ಕಳೆದ ಒಂದು ವರ್ಷದಿಂದ ರಾಜಕೀಯಕ್ಕೆ ಬರುವ ಬಗ್ಗೆ ತೀರ್ಮಾನ ಮಾಡಿದ್ದೆ. ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ. ಮೈಸೂರಿನ ಅಭಿವೃದ್ದಿಯ ವಿಚಾರವಾಗಿ ನನ್ನದೇ ಆದ ಕನಸುಗಳು ಇವೆ. ದಕ್ಷಿಣ ಭಾರತದಲ್ಲಿ ಮೈಸೂರು ಪ್ರವಾಸೋದ್ಯಮ ಕೇಂದ್ರವಾಗಿ ಮಾಡಬೇಕು ಎಂಬ ಆಸೆ ಇದೆ ಆ ಕೆಲಸವನ್ನ ಮಾಡುತ್ತೇನೆ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ಎಸಿ ಕೊಠಡಿಯಿಂದ ಹೊರ ಬರುವುದು ದೊಡ್ಡ ವಿಚಾರವಲ್ಲ. ನಮ್ಮ ಕುಟುಂಬದ ವ್ಯಾಜ್ಯಗಳು ಅದರದೇ ಆದ ಕಾನೂನು ವ್ಯಾಪ್ತಿಯಲ್ಲಿ ಇದೆ. ಅದು ಅದರ ಅನುಸಾರವಾಗಿ ನಡೆಯುತ್ತದೆ. ಅದಕ್ಕೂ ರಾಜಕಾರಣಕ್ಕೆ ಸಂಬಂಧವಿಲ್ಲ ಎಂದರು.
ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ರಾಜಕಾರಣ ಮುಖ್ಯ:ಸಾಮಾಜಿಕ ಸಮಸ್ಯೆಗಳನ್ನು ರಾಜಕೀಯ ಮೂಲಕ ಬಗೆಹರಿಸಲು ಸಾಧ್ಯ. ಇದೇ ಕಾರಣಕ್ಕಾಗಿ ನಾನು ರಾಜಕಾರಣಕ್ಕೆ ಬರಲು ತೀರ್ಮಾನ ಮಾಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಗಮನಿಸಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಎಸಿ ರೂಮ್ ನಿಂದ ಜನರ ಮಧ್ಯೆ ಬರುವುದು ಏನು ಕಷ್ಟವಲ್ಲ. ನಾನು ಈಗಾಗಲೇ 9 ವರ್ಷಗಳಿಂದ ಜನರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ, ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಹಾಗೂ ಸೈಬರ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಅವಕಾಶ ಸಿಕ್ಕಿದೆ ಎಂದು ರಾಜಕಾರಣಕ್ಕೆ ಬಂದಿಲ್ಲ, ಇಲ್ಲಿಯ ಸವಾಲುಗಳನ್ನು ತಿಳಿದೇ ಬಂದಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದರು.
ಇದನ್ನೂ ಓದಿ:ಅಧಿಕಾರ ಇದ್ದರೆ ಇನ್ನೂ ಹೆಚ್ಚು ಅಭಿವೃದ್ಧಿ ಮಾಡಲು ಅವಕಾಶ ಸಿಗುತ್ತೆ: ಯದುವೀರ ಒಡೆಯರ್