ರಾಮನಗರ: "ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನಮ್ಮ ಕ್ಷೇತ್ರದಲ್ಲಿ ರಾಜಕೀಯ ಮಾಡಲ್ಲ. ಕಾರ್ಯಕರ್ತರಿಗೆ, ಮುಖಂಡರಿಗೆ ಯಾವುದೇ ಆತಂಕ ಬೇಡ. ನಾನೇ ಎನ್ಡಿಎ ಮೈತ್ರಿ ಅಭ್ಯರ್ಥಿ" ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಟಿಕೆಟ್‌ಗಾಗಿ ಜೆಡಿಎಸ್ - ಬಿಜೆಪಿ ಹಗ್ಗಜಗ್ಗಾಟದ ನಡುವೆಯೂ ಮೈತ್ರಿ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬುಧವಾರ ಖಾಸಗಿ ರೆಸಾರ್ಟ್‌ನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಇಂದು ಸಭೆ ನಡೆಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಬಿಜೆಪಿ ಮುಖಂಡರು ಈ ಮೈತ್ರಿ ಪಕ್ಷದಿಂದ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಲಾಯಿತು. ಈ ಮೊದಲಿನಿಂದಲೂ ತಾವಿರುವ ಪಕ್ಷಗಳಿಗೇ ಟಾಂಗ್ ಕೊಡುವಲ್ಲಿ ಪರಿಣತರಾಗಿರುವ ಯೋಗೇಶ್ವರ್, ಬಿಜೆಪಿ ಬೆಂಬಲಿಗರ ಸಭೆ ಕರೆದು ಈ ಸಲ ಮೈತ್ರಿ ಅಭ್ಯರ್ಥಿ ಟಿಕೆಟ್ ನನಗೆ ಎಂದು ಬಹಿರಂಗವಾಗಿ ಭಾಷಣ ಮಾಡಿದರು.