ಬೆಂಗಳೂರು: ''ಹೌದು.. ನಾನು ಯಾವ ದೈವ ಭಕ್ತನೂ ಅಲ್ಲ, ನಾನು ಸಂವಿಧಾನದ ಭಕ್ತ'' ಎಂದು ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
''ನಾನು ಬುದ್ಧ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳು, ನಿಜಶರಣ ಅಂಬಿಗರ ಚೌಡಯ್ಯ ಪ್ರತಿಪಾದಿಸಿದ ಸಮಾನತೆ, ಸ್ವಾಭಿಮಾನ ತತ್ವಗಳ ಭಕ್ತ. ದಯೆಯೇ ಧರ್ಮ, ಮಾನವತೆಯೇ ಪರಮದೈವ ಎಂದು ನಂಬಿದವನು ನಾನು'' ಎಂದಿದ್ದಾರೆ. ಸಂವಿಧಾನದಲ್ಲಿ ಆಸ್ತಿಕನಿಗೂ ನಾಸ್ತಿಕನಿಗೂ ಸಮಾನ ಅವಕಾಶವಿದೆ. ಸಮಾನ ಹಕ್ಕುಗಳಿವೆ. ಇದನ್ನು ಬಿಜೆಪಿಯವರು ಅರಿತುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ.
''ಬಹುಶಃ ನಾನು ಪರಂಪರೆಯ ದೇವಾಲಯಗಳನ್ನು ಸಂದರ್ಶಿಸಿದಷ್ಟು ಬಿಜೆಪಿಯವರು ಹೋಗಿರಲಿಕ್ಕಿಲ್ಲ. ನಾನು ಕಾಶಿ, ಮಥುರಾ, ಬುದ್ಧಗಯಾ, ಅಜ್ಮೇರ್ ದರ್ಗಾ, ಚರ್ಚ್ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳನ್ನು ಸಂದರ್ಶಿದ್ದೇನೆ. ಭಕ್ತನಾಗಿ ಅಲ್ಲ, ಅಧ್ಯಯನಕಾರನಾಗಿ. ವಿವಿಧ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಇತಿಹಾಸಗಳನ್ನು ಅಧ್ಯಯನ ಮಾಡುವುದು ನನ್ನ ಆಸಕ್ತಿ. ಮುಂದೆಯೂ ನನ್ನ ಈ ಅಧ್ಯಯನದ ಪ್ರವಾಸಗಳನ್ನು ಮಾಡುತ್ತಿರುತ್ತೇನೆ'' ಎಂದು ಹೇಳಿದ್ದಾರೆ.