ಮೈಸೂರು:ಪತ್ನಿಯನ್ನು ಪತಿಯೇ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ಬೇರೊಂದು ಮಹಿಳೆ ಜೊತೆಗಿನ ಸಂಬಂಧ ವಿರೋಧಿಸಿದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ರೋಜಾ (37) ಪತಿಯಿಂದ ಕೊಲೆಯಾದ ಮಹಿಳೆ. ಸ್ವಾಮಿನಾಯಕ ಕೊಲೆ ಮಾಡಿ ಜೈಲು ಸೇರಿರುವ ಆರೋಪಿಯಾಗಿದ್ದಾನೆ.
12 ವರ್ಷಗಳ ಹಿಂದೆ ಸ್ವಾಮಿನಾಯಕ ಹಾಗೂ ರೋಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹಲವು ವರ್ಷಗಳ ಕಾಲ ಅನ್ಯೋನ್ಯ ಜೀವನ ಸಾಗಿಸುತ್ತಿದ್ದರು. ಆದರೆ, ಪತಿಗೆ ಅದೇ ಗ್ರಾಮದ ಮಹಿಳೆಯೊಬ್ಬಳ ಜೊತೆ ಸಂಬಂಧ ಏರ್ಪಟ್ಟಿದೆ. ಈ ವಿಚಾರ ಪತ್ನಿ ರೋಜಾಗೆ ಗಮನಕ್ಕೆ ಬಂದು ಗಲಾಟೆ ನಡೆದಿತ್ತು. ಕುಟುಂಬಸ್ಥರು ಸ್ವಾಮಿನಾಯಕನಿಗೆ ಒಂದೆರಡು ಬಾರಿ ಬುದ್ಧಿವಾದ ಹೇಳಿದ್ದರು. ಆದರೂ ಕೂಡ ಮಹಿಳೆಯ ಜೊತೆಗಿನ ಸಂಬಂಧ ಮುಂದುವರೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಇದೇ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ಹೆಚ್ಚಾಗಿತ್ತು. ಭಾನುವಾರ ಮಧ್ಯಾಹ್ನ ನೀರು ಹಿಡಿಯಲು ಮನೆಯಿಂದ ಹೊರಬಂದ ರೋಜಾ ಮೇಲೆ ಸ್ವಾಮಿನಾಯಕ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ರೋಜಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಪತ್ನಿ ಕೊಂದ ಸ್ವಾಮಿನಾಯಕ ಬಿಳಿಕೆರೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ರಾಯಚೂರು: ಮನೆಯವರನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಗ್ಯಾಂಗ್ - HOUSE ROBBERY