ಕೊಲೆ ಬಗ್ಗೆ ಡಿಸಿಪಿ ಮಾಹಿತಿ (Etv bharat) ಬೆಂಗಳೂರು:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಪತಿಯು ತನ್ನ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾದ ಘಟನೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
28 ವರ್ಷದ ಹಿಂದೂ ಹತ್ಯೆಗೊಳಗಾದ ಮಹಿಳೆ. ಈಕೆಯ ಪತಿ ಸೆಲ್ವಿನ್ ಫ್ರಾನ್ಸಿಸ್ ಚಾಕುವಿನಿಂದ ಕೊಲೆಗೈದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂ ಹಾಗೂ ಸೆಲ್ವಿನ್ ಫ್ರಾನ್ಸಿಸ್ ದಂಪತಿಯು ಕಳೆದ 12 ವರ್ಷಗಳ ಹಿಂದೆ ಪ್ರೇಮ ವಿವಾಹ ಮಾಡಿಕೊಂಡಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೋರಮಂಗಲದ 6ನೇ ಬ್ಲಾಕ್ನಲ್ಲಿ ವಾಸವಾಗಿದ್ದರು. ಗಂಡ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರೆ, ಹೆಂಡತಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಅನೋನ್ಯವಾಗಿದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಇದರಿಂದ ಮುನಿಸಿಕೊಂಡು ಕಳೆದ ಒಂದು ವರ್ಷದಿಂದ ಪತ್ನಿ ಕೋರಮಂಗಲದ ವೆಂಕಟಪುರದಲ್ಲಿದ್ದ ತಾಯಿ ಮನೆಯಲ್ಲಿ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದಲೂ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಇದರಿಂದ ಬೇಸತ್ತ ಹಿಂದೂ, ಇಂದು ಕೋರಮಂಗಲ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ನೀಡಿದ್ದಳು. ಪೊಲೀಸರು ಸಹ ಸೆಲ್ವಿನ್ಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದರು.
ಇದರಂತೆ, ಠಾಣೆ ಸಮೀಪ ಬಳಿ ಬಂದಿದ್ದ ಸೆಲ್ವಿನ್, ದೂರು ನೀಡಿ ಹೊರಬರುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿ ಆಕೆಯ ಜೊತೆ ಗಲಾಟೆ ಮಾಡಿದ್ದಾನೆ. ಅಲ್ಲದೆ, ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಕೋರಮಂಗಲ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಪತ್ನಿಯ ಶೀಲ ಶಂಕಿಸಿ, ಪತಿಯೇ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಹಂತಕನ ಶೋಧಕ್ಕಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಜಾತ್ರೆಗೆಂದು ಊರಿಗೆ ಬಂದ ಪತ್ನಿಯನ್ನು ಹೊಡೆದು ಕೊಂದ ಪತಿ - Husband Kills Wife