ಚಿಕ್ಕಮಗಳೂರು: ಕೌಟುಂಬಿಕ ಕಲಹ ಮತ್ತು ಸಂಶಯದ ಕಾರಣದಿಂದ ಪತ್ನಿಯನ್ನೇ ಪತಿಯೋರ್ವ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗಡಿ ಗ್ರಾಮವಾದ ಕರಕುಚ್ಚಿ ಎ.ಕಾಲೊನಿಯಲ್ಲಿ ನಡೆದಿದೆ. ಮೇಘನಾ ಹತ್ಯೆಯಾದ ಮಹಿಳೆ. ಆರೋಪಿ ಚರಣ್ ಮತ್ತು ಈತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಮುಳು ಕಟ್ಟಮ್ಮ ಜಾತ್ರೆ ಹಿನ್ನೆಲೆಯಲ್ಲಿ ಮೇಘನಾ ಊರಿಗೆ ಬಂದಿದ್ದರು. ಈ ವೇಳೆ, ಮನೆಗೆಲಸದ ನಿಮಿತ್ತ ಊರಿನ ಸಮೀಪದ ಕಾಲುವೆಗೆ ಮೇಘನಾ ಹೋದಾಗ ಅಲ್ಲಿಯೇ ಪತಿ ಚರಣ್ ದಾಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಈ ವೇಳೆ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಗ್ರಾಮಸ್ಥರು ಬಿಡಲಿಲ್ಲ. ಅಲ್ಲದೇ, ಚರಣ್ ಮನೆಯ ಗಾಜುಗಳನ್ನೂ ಪುಡಿಗಟ್ಟಿ ಜನರ ಆಕ್ರೋಶ ಹೊರಹಾಕಿದರು. ನಂತರ ಪೊಲೀಸರು ಗ್ರಾಮಸ್ಥರ ಮನವೊಲಿಸಿದರು. ಸದ್ಯ ಮೃತ ಮೇಘನಾ ತಾಯಿ ಕೋಮಲ ನೀಡಿರುವ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಹೆಚ್ಚಿನ ಮಾಹಿತಿ ನೀಡಿ, ದೂರದಾರೆ ಕೋಮಲ ಅವರ ಪುತ್ರಿಯಾದ ಮೇಘನಾ ಅವರಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಕೌಟುಂಬಿಕ ಸಮಸ್ಯೆ ಕಾರಣ ಕಳೆದ ಒಂದು ವರ್ಷದಿಂದ ಶಿವಮೊಗ್ಗದ ಶಂಕರ್ ಘಟ್ಟದಲ್ಲಿರುವ ಸಂಬಂಧಿಕರ ಮನೆಯಲ್ಲಿ ಮೇಘನಾ ಇರುತ್ತಿದ್ದರು. ಇದೀಗ ಜಾತ್ರೆಗೆಂದು ಊರಿಗೆ ಬಂದಿದ್ದಳು ಎಂದು ತಿಳಿಸಿದರು.