ಹುಬ್ಬಳ್ಳಿ:ಮಕ್ಕಳ ಅಧ್ಯಯನಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಪಡೆದು ಉತ್ತಮ ಸಾಧನೆ ಮಾಡಿದ 41 ಸಾರಿಗೆ ಸಿಬ್ಬಂದಿ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಾಗಿ ಹುಬ್ಬಳ್ಳಿ ಗ್ರಾಮಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಸಮುದಾಯದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾರಿಗೆ ಸಿಬ್ಬಂದಿ ಹೆಚ್ಚಿನ ಸಮಯ ಕುಟುಂಬದಿಂದ ದೂರವಿದ್ದು, ಸಾರ್ವಜನಿಕರ ನಡುವೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕುಟುಂಬ ಅವಶ್ಯಕತೆಗಳು ಹಾಗೂ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದಿಲ್ಲ. ಅಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಸಹ ಮಕ್ಕಳು ವೈಯಕ್ತಿಕ ಆಸಕ್ತಿ ಹಾಗೂ ನಿರಂತರ ಅಧ್ಯಯನಶೀಲತೆಯಿಂದ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ. ಅವರ ಉನ್ನತ ವಾಸಂಗಕ್ಕೆ ಪ್ರೇರೇಪಿಸಲು ಹಾಗೂ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಬಹುಮಾನದೊಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದರು.
ಎಸ್ಎಸ್ಎಲ್ಸಿಯಲ್ಲಿ ಶೇ. 70 ರಿಂದ 80 ಅಂಕ ಪಡೆದ ವಿದ್ಯಾರ್ಥಿಗಳಿಗೆ 2,500/2000 ರೂ., ಶೇ. 81 ರಿಂದ 90 ಅಂಕ ಪಡೆದವರಿಗೆ 3,500/3,000 ರೂ., ಶೇ. 90.01ಕ್ಕೂ ಹೆಚ್ಚ ಅಂಕ ಪಡೆದ ವಿದ್ಯಾರ್ಥಿಗಳಿಗೆ 4,000/3,500 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಪಿಯುಸಿಯಲ್ಲಿ ಶೇ. 70 ರಿಂದ 80 ಅಂಕ ಪಡೆದ ವಿದ್ಯಾರ್ಥಿಗಳಿಗೆ 3,000/2,500 ರೂ., 81 ರಿಂದ 90 ಅಂಕ ಪಡೆದ ವಿದ್ಯಾರ್ಥಿಗಳಿಗೆ 4,000/3,500 ರೂ., 90.01ಕ್ಕೂ ಹೆಚ್ಚ ಅಂಕ ಪಡೆದ ವಿದ್ಯಾರ್ಥಿಗಳಿಗೆ 4,500/4,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.