ಕರ್ನಾಟಕ

karnataka

ETV Bharat / state

ಹುಬ್ಬಳ್ಳಿ-ಧಾರವಾಡ ಬಂದ್​: ಬೆಳಗ್ಗೆಯಿಂದಲೇ ದಲಿತ ಸಂಘಟನೆಗಳ ಪ್ರತಿಭಟನೆ - HUBBALLI DHARWAD BANDH

ಅಂಬೇಡ್ಕರ್​ ಕುರಿತ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು ಇಂದು ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ಕೊಟ್ಟಿವೆ.

hubballi-dharwad-bandh
ದಲಿತ ಸಂಘಟನೆಗಳ ಪ್ರತಿಭಟನೆ (ETV Bharat)

By ETV Bharat Karnataka Team

Published : Jan 9, 2025, 8:00 AM IST

Updated : Jan 9, 2025, 11:14 AM IST

ಧಾರವಾಡ:ಡಾ.ಬಿ.ಆರ್‌.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ವಿರೋಧಿಸಿ ಇಂದು ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಧಾರವಾಡದ ಜುಬ್ಲಿ ವೃತ್ತದಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿ, ಅಮಿತ್ ಶಾ ವಿರುದ್ದ ಘೋಷಣೆ ಕೂಗಿದರು.

ಜುಬ್ಲಿ ವೃತ್ತಕ್ಕೆ ಬುಧವಾರ ರಾತ್ರಿಯೇ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಡಿಸಿಪಿಗಳಾದ ನಂದಗಾವಿ, ರವೀಶ ಮತ್ತು ಎಸಿಪಿ ಜೊತೆಗಿದ್ದರು. ಬಂದ್, ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.

ದಲಿತಪರ ಹೋರಾಟಗಾರ ಪರಮೇಶ್ವರ ಕಾಳೆ ಮಾತನಾಡಿದರು (ETV Bharat)

ದಲಿತಪರ ಹೋರಾಟಗಾರ ಪರಮೇಶ್ವರ ಕಾಳೆ ಮಾತನಾಡಿ, ''ಅಂಬೇಡ್ಕರ್‌ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆ ಖಂಡಿಸಿ ಧಾರವಾಡ, ಹುಬ್ಬಳ್ಳಿ ಬಂದ್​ಗೆ ಕರೆ ನೀಡಿದ್ದೇವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಅವಳಿ ನಗರವನ್ನು ಸಂಪೂರ್ಣ ಬಂದ್‌ ಮಾಡಲಾಗುವುದು. ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ವ್ಯಾಪಾರಸ್ಥರು, ಹೋಟೆಲ್, ಬಾರ್ ಸೇರಿದಂತೆ ಶಾಲಾ-ಕಾಲೇಜ್‌ಗಳನ್ನು ಬಂದ್ ಮಾಡುವಂತೆ ಮನವಿ ಮಾಡಲಾಗಿದೆ. ಸ್ವಯಂಪ್ರೇರಣೆಯಿಂದ ಬಂದ್‌ಗೆ ಎಲ್ಲರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದೇವೆ. ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಆಯುಕ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಡಿಪಿಐ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ'' ಎಂದು ಹೇಳಿದರು.

"ಬೆಲ್ಲದ್‌ಗೆ ಮಸಿ ಬಳಿಯುತ್ತೇವೆ": ''ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ದೇಶದಿಂದ ಗಡಿಪಾರು ಮಾಡಬೇಕು. ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್​ ಅವರು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೂ ಈ ಒಂದು ಹೋರಾಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಇದೇ ರೀತಿಯ ಹೇಳಿಕೆಗಳನ್ನು ಬೆಲ್ಲದ್ ನೀಡುತ್ತಾ ಹೋದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಅವರಿಗೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ'' ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ ಬಂದ್ ವಾಪಸ್​ ಪಡೆದುಕೊಳ್ಳದಿದ್ರೆ ಬಿಜೆಪಿಯಿಂದ ಪ್ರತಿಯಾಗಿ ಹೋರಾಟ - ಅರವಿಂದ ಬೆಲ್ಲದ್ ಎಚ್ಚರಿಕೆ - ARVIND BELLAD

ಹುಬ್ಬಳ್ಳಿಯಲ್ಲಿ ಹೇಗಿದೆ ಬಂದ್ : ನಗರದ ಚೆನ್ನಮ್ಮ ವೃತ್ತದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಕೆಲವು ಕಡೆ ಪ್ರತಿಭಟನಾಕಾರರೆ ಒತ್ತಾಯ ಪೂರ್ವಕವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿಸಿದ್ರೆ, ಕೆಲವು ಕಡೆ ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾರಿಗೆ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಮುಂಜಾಗೃತ ಕ್ರಮವಾಗಿ ಅವಳಿ ನಗರದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹು-ಧಾ ಅವಳಿನಗರ ಬಂದ್ ಹಿನ್ನೆಲೆ ಪೊಲೀಸ್ ಕಮಿಷನರ್‌ ಎನ್ ಶಶಿಕುಮಾರ್ ನಗರದ ಚೆನ್ನಮ್ಮ ವೃತ್ತ ಸೇರಿದಂತೆ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಎನ್ ಶಶಿಕುಮಾರ್, "ದಲಿತ ಪರ ಸಂಘಟನೆಗಳು ಹುಬ್ಬಳ್ಳಿ-ಧಾರವಾಡ ಬಂದ್ ಕರೆ ನೀಡಿವೆ. ರಾತ್ರಿಯಿಂದಲೂ ಅಧಿಕಾರಿಗಳು, ಸಿಬ್ಬಂದಿ ಬಂದೋಬಸ್ತ್​ನಲ್ಲಿದ್ದಾರೆ. 2,000ಕ್ಕೂ ಹೆಚ್ಚು ಪೊಲೀಸ್, ಹೋಂ ಗಾರ್ಡ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಲವಂತದ ಬಂದ್​ಗೆ ಅವಕಾಶವಿಲ್ಲ. ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಚನ್ನಮ್ಮ ವೃತ್ತದ ಬಳಿ ಎಲ್ಲಾ ಪ್ರತಿಭಟನಾಕಾರರು ಸೇರುವುದರಿಂದ ಚನ್ನಮ್ಮ ವೃತ್ತವನ್ನು ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ" ಎಂದರು.

ಇದನ್ನೂ ಓದಿ:ಮೈಸೂರು ಬಂದ್​ಗೆ ಮಿಶ್ರ ಪ್ರತಿಕ್ರಿಯೆ: ಸಾರಿಗೆ ಸೇವೆಯಲ್ಲಿ ವ್ಯತ್ಯಯ, ಬಿಗಿ ಪೊಲೀಸ್‌ ಬಂದೋಬಸ್ತ್ - MYSURU BANDH

Last Updated : Jan 9, 2025, 11:14 AM IST

ABOUT THE AUTHOR

...view details