ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ವ್ಹೀಲಿಂಗ್ ಹಾವಳಿ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತರು ಸೇರಿ ಕಳೆದ ಏಳು ತಿಂಗಳಲ್ಲಿ 325 ಮಂದಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರ ಕೈಗೆ ದ್ವಿಚಕ್ರವಾಹನ ನೀಡಿ ಪರೋಕ್ಷವಾಗಿ ವ್ಹೀಲಿಂಗ್‌ಗೆ ಕಾರಣರಾದ 74 ಮಂದಿ ಪೋಷಕರು ಹಾಗೂ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ವರ್ಷ ದಾಖಲಾಗಿದ್ದ 325 ಪ್ರಕರಣಗಳ ಪೈಕಿ 72 ಮಂದಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವ ಸಂಚಾರ ಪೊಲೀಸರು ಒಟ್ಟು 5.15 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಪ್ರಕರಣ ದಾಖಲಾದ ಪೈಕಿ 283 ಮಂದಿ ಯುವಕರಾಗಿದ್ದು, 283 ದ್ವಿಚಕ್ರವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ 75 ಮಂದಿ ಅಪ್ರಾಪ್ತರಾಗಿದ್ದಾರೆ. ಒಟ್ಟಾರೆ 325 ಪ್ರಕರಣ ದಾಖಲಿಸಿ 12.21 ಲಕ್ಷ ದಂಡ ಸಂಗ್ರಹಿಸಿದ್ದಾರೆ.
ಕಳೆದ ವರ್ಷ ವರ್ಷ ದಾಖಲಾದ 219 ಪ್ರಕರಣಗಳ ಪೈಕಿ 214 ಮಂದಿ ವಿರುದ್ಧ ವ್ಹೀಲಿಂಗ್ ಕೇಸ್ ದಾಖಲಿಸಿ 209 ದ್ವಿಚಕ್ರವಾಹನ ಜಪ್ತಿ ಮಾಡಲಾಗಿತ್ತು. 74 ಮಂದಿ ಅಪ್ರಾಪ್ತರು ವ್ಹೀಲಿಂಗ್ ಪ್ರಕರಣದಲ್ಲಿ ಕಂಡುಬಂದಿದ್ದು, ವ್ಹೀಲಿಂಗ್ ಮಾಡಲು ಪರೋಕ್ಷ ಕಾರಣರಾದ 71 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಂಡು 10.39 ಲಕ್ಷ ರೂ.ದಂಡ ವಸೂಲಿ ಮಾಡಿದ್ದರು.
75 ಮಂದಿ ಪೋಷಕರಿಂದ ಸರಾಸರಿ 7 ಸಾವಿರ ದಂಡ: ಕಳೆದ ಜುಲೈ 31ರ ಪ್ರಕಾರ, ನಗರದಲ್ಲಿ ದಾಖಲಾದ ಅಪ್ರಾಪ್ತರ ವಿರುದ್ದ ಪ್ರಕರಣಗಳಲ್ಲಿ ಪೋಷಕರು 5.15 ಲಕ್ಷ ದಂಡ ಕಟ್ಟಿದ್ದಾರೆ. ಪೋಷಕರಿಂದ ತಲಾ ಸರಾಸರಿ 7 ಸಾವಿರ ದಂಡ ತೆತ್ತಿದ್ದಾರೆ. ಕಳೆದ ವರ್ಷ ಇಷ್ಟೇ ಪ್ರಮಾಣದಲ್ಲಿ ಪೊಲೀಸರು ದಂಡ ವಸೂಲಿ ಮಾಡಿಕೊಂಡಿದ್ದರು. ಗ್ಯಾರೇಜ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳುವ ಯುವಕರೇ ವ್ಹೀಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಬಹುತೇಕ ಪೋಷಕರಿಗೆ ಅಥವಾ ದ್ವಿಚಕ್ರ ವಾಹನ ಮಾಲೀಕರಿಗೆ ಅಪಾಯಕಾರಿ ವ್ಹೀಲಿಂಗ್ನಲ್ಲಿ ತೊಡಗಿಸಿಕೊಂಡಿರುವುದು ಅರಿವಿರುವುದಿಲ್ಲ. ಪ್ರಕರಣದಲ್ಲಿ ಸಿಕ್ಕಿಬಿದ್ದ ನಂತರವಷ್ಟೇ ತಮ್ಮ ಮಕ್ಕಳ ವ್ಹೀಲಿಂಗ್ ದುಶ್ಚಟ ಬಗ್ಗೆ ಪೋಷಕರಿಗೆ ಗೊತ್ತಾಗಿದೆ. ನಿರ್ಲಕ್ಷ್ಯದಿಂದಲೋ ಅಥವಾ ತಮಗರಿವಿಲ್ಲದಂತೆ ವ್ಹೀಲಿಂಗ್ನಲ್ಲಿ ತಮ್ಮ ಮಕ್ಕಳು ಸಿಕ್ಕಿಬಿದ್ದಿದ್ದರಿಂದ ಅನ್ಯದಾರಿ ಕಾಣದೆ ದಂಡ ವಿಧಿಸಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.