ದಾವಣಗೆರೆ :ತೆಂಗಿನಕಾಯಿ ದರ ದಿಢೀರ್ ಗಗನಕ್ಕೇರಿಕೆಯಾಗಿದೆ. ಚಟ್ನಿಗೆ ಹೆಚ್ಚು ಬಳಕೆ ಆಗುವ ತೆಂಗಿನ ಕಾಯಿಗೆ ಇದೀಗ ಬಂಗಾರದ ಬೆಲೆ ಬಂದಿದೆ. ಹೋಟೆಲ್‌ಗಳಲ್ಲಿ ನಾನಾ ತಿಂಡಿಗಳೊಂದಿಗೆ ಗ್ರಾಹಕರಿಗೆ ಕಾಯಿ ಚಟ್ನಿ ಕೊಡುವುದೇ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ದರ ಏರಿಕೆಯ ಬಿಸಿ ಬೆಣ್ಣೆ ದೋಸೆ ಹೋಟೆಲ್ಗಳಿಗೂ ತಟ್ಟಿದೆ. ಇದರಿಂದ ಬೆಣ್ಣೆ ದೋಸೆಯ ದರವನ್ನು ಹೆಚ್ಚಿಸಲು ಮಾಲೀಕರು ಚಿಂತನೆ ನಡೆಸಿದ್ದಾರೆ. ಮತ್ತಷ್ಟು ಹೋಟೆಲ್ಗಳು ಈಗಾಗಲೇ ತಿಂಡಿ ಜೊತೆ ಚಟ್ನಿ ಕೊಡುವುದನ್ನು ನಿಲ್ಲಿಸಿವೆ.
ಬೆಣ್ಣೆ ದೋಸೆ ಹೋಟೆಲ್ಗಳಿಗೂ ಕಾಯಿ ಚಟ್ನಿಗೂ ಬಿಡಿಸಲಾಗದ ನಂಟಿದೆ. ಚಟ್ನಿ ಇಲ್ಲದೆ ದೋಸೆ ಸವಿಯುವುದು ಉಪ್ಪಿಲ್ಲದೆ ಊಟದಂತೆ ಅನ್ನೋ ಮಾತಿದೆ. ಇದೀಗ ಕಾಯಿ ದರ ಗಗನ್ನಕ್ಕೆ ಏರಿರುವುದರಿಂದ ದೋಸೆ ದರವನ್ನು ಹೆಚ್ಚಿಸಲು ತೆರೆ ಮರೆಯಲ್ಲಿ ಮಾಲೀಕರು ಸಿದ್ಧತೆ ನಡೆಸಿದ್ದಾರೆ. ಇನ್ನಷ್ಟು ಹೋಟೆಲ್‌ಗಳಲ್ಲಿ ತಿಂಡಿ ಜೊತೆ ಕಾಯಿ ಕಡಿಮೆ ಬಳಸಿ, ಕಡಲೆ ಹೆಚ್ಚು ಬಳಸಿ ಚಟ್ನಿ ರೆಡಿ ಮಾಡಿ ಗ್ರಾಹಕರಿಗೆ ಕೊಡಲಾಗುತ್ತಿದೆ. ಆದರೆ ಬೆಣ್ಣೆ ದೋಸೆಗೆ ಚಟ್ನಿ ನೀಡಲೇಬೇಕಿರುವುದರಿಂದ ಕೆಲ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಹೆಚ್ಚು ಬೆಲೆ ತೆತ್ತು ಕಾಯಿ ಖರೀದಿಸಿ, ಗ್ರಾಹಕರಿಗೆ ಕಾಯಿ ಚಟ್ನಿ ಉಣಬಡಿಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ ಸಂತೆಬೆನ್ನೂರು, ರಾಮಗಿರಿ, ಹೊಸದುರ್ಗ, ಭದ್ರಾವತಿ, ತುಮಕೂರು, ಗುಬ್ಬಿ ಭಾಗದಿಂದ ತೆಂಗಿನಕಾಯಿಗಳು ಆಮದಾಗುತ್ತವೆ.
ತೆಂಗಿನಕಾಯಿ ದರ ಏರಿಕೆಗೆ ಪ್ರಮುಖ ಕಾರಣ ಏನು, ಪ್ರಸ್ತುತ ದರ ಎಷ್ಟಿದೆ :ತೆಂಗು ಸಗಟು ವ್ಯಾಪಾರಿ ಶಿವಕುಮಾರ್ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, “ಸಾಕಷ್ಟು ರೈತರು ತೆಂಗು ಬೆಳೆಯುವುದನ್ನು ಬಿಟ್ಟು, ಅಡಿಕೆ ಬೆಳೆಯತ್ತ ವಾಲಿದ್ದರರಿಂದ ತೆಂಗಿನಕಾಯಿ ಮಾರುಕಟ್ಟೆಗೆ ಬಾರದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಫಸಲು ಕೂಡ ಕಡಿಮೆ ಇದೆ. ಕಾಯಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ ಕಳೆದ ವರ್ಷ ಮಳೆ ಬಾರದೆ ಬರ ಆವರಿಸಿದ ಕಾರಣ ತೆಂಗಿನಕಾಯಿ ಇಳುವರಿ ಕುಸಿದಿದೆ. ಇದರಿಂದ ಹೋಟೆಲ್ ಮಾಲೀಕರು ತೊಂದರೆ ಎದುರಿಸುವಂತಾಗಿದೆ. ಜತೆಗೆ, ಚಟ್ನಿ ಚೆನ್ನಾಗಿ ಆಗ್ಬೇಕಾದರೆ ಕಾಯಿ ಅಗತ್ಯ. ಇದರಿಂದ ಹೋಟೆಲ್ ಅವರು ಕಷ್ಟ ಎದುರಿಸುವಂತಾಗಿದೆ. ಗಣೇಶನ ಹಬ್ಬದಿಂದಲೇ ದರ ಏರುಪೇರಾಗಿದೆ. ಒಂದು ಕಾಯಿ ಹೋಲ್ ಸೇಲ್ ದರ 26 ರಿಂದ 28 ರೂಪಾಯಿ ಇದೆ. ಚಿಲ್ಲರೆ 30-35 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ದಾವಣಗೆರೆಗೆ ಚಿಕ್ಕಜಾಜೂರು, ಹೊಸದುರ್ಗ, ಹೊಳಲ್ಕೆರೆ, ರಾಮಗಿರಿ ಭಾಗದಿಂದ ಹೆಚ್ಚು ತೆಂಗು ಆಮದಾಗುತ್ತದೆ” ಎಂದು ಮಾಹಿತಿ ನೀಡಿದರು.