ದಾವಣಗೆರೆ :ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರ್ಕಾರಿ ಕಟ್ಟಡವೇ ಇಲ್ಲ. ಸರಿಸುಮಾರು 10 ರಿಂದ 12 ವರ್ಷಗಳಿಂದ ಖಾಸಗಿ ಕಟ್ಟಡದಲ್ಲೇ 5000 ಸಾವಿರ ರೂ ಬಾಡಿಗೆ ಸಂದಾಯ ಮಾಡಿ ಆಸ್ಪತ್ರೆ ನಡೆಸುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಕಟ್ಟಡ ಇಲ್ಲದೇ ಇಕ್ಕಟ್ಟಾದ ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಟ್ಟಡ ಕಿರಿದಾಗಿರುವುದರಿಂದ ಇಲ್ಲಿನ ಸಿಬ್ಬಂದಿ ಕಷ್ಟ ಅನುಭವಿಸುವಂತಾಗಿದೆ. ಚಿಕಿತ್ಸೆಗೆ ಒಂದು ಪಿಹೆಚ್ಸಿ ಎಂದರೆ ಐದಾರು ಬೆಡ್ ಇರುವ ಆಸ್ಪತ್ರೆ ಇರಬೇಕಾಗುತ್ತೆ. ಆದರೆ, ಕರೆಕಟ್ಟೆ ಗ್ರಾಮದ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ಬೆಡ್ಗಳನ್ನು ಮಾತ್ರವೇ ಹಾಕಲಾಗಿದೆ. ಇದರಿಂದ ರೋಗಿಗಳು ತೊಂದರೆಗೆ ಒಳಗಾಗಿದ್ದಾರೆ.
ಇದಲ್ಲದೇ ಗ್ರಾಪಂ ಹಾಗೂ ಆರೋಗ್ಯ ಇಲಾಖೆಗೆ ಆಸ್ಪತ್ರೆ ನಡೆಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕರೆಕಟ್ಟೆ ಗ್ರಾಮದ ಚಿಕ್ಕ ಮನೆಯೊಂದರಲ್ಲಿ ಆರಂಭವಾದ ಈ ಆಸ್ಪತ್ರೆ ನಂತರ ಅದೇ ಗ್ರಾಮದ ಅಂಬೇಡ್ಕರ್ ಭವನ, ಬಳಿಕ ಗ್ರಾಪಂನಲ್ಲೇ ನಡೆಸುವ ಪರಿಸ್ಥಿತಿ ಇರುವುದರಿಂದ 12 ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲದೇ ಸಿಬ್ಬಂದಿ ಕಷ್ಟಪಡುವಂತೆ ಆಗಿದೆ.
ಈ ಗ್ರಾಮದಲ್ಲೇ ಆರು ಸಾವಿರ ಜನ ಸಂಖ್ಯೆ ಇದ್ದು, ಸುತ್ತ ಇರುವ ಕಬ್ಬಳ, ಕಾಶಿಪುರ, ಆಲೂರು, ಹರೇಮಲ್ಲಪುರ, ನವೀಲೆಹಾಳ್, ದೊಡ್ಡಘಟ್ಟ, ಸೋಮಲಪುರ ಸೇರಿ ಏಳು ಗ್ರಾಮಗಳಿಂದ ಆಸ್ಪತ್ರೆಗೆ ಜನ ಭೇಟಿ ನೀಡುತ್ತಾರೆ. ಹನ್ನೆರಡು ವರ್ಷದ ಹಿಂದೆ ಆಸ್ಪತ್ರೆ ನಿರ್ಮಾಣ ಮಾಡಲು ನಿವೇಶನ ನೀಡಲಾಗಿತ್ತು. ಸ್ಮಶಾನಕ್ಕೆ ಎರಡೂವರೆ ಎಕರೆ, ಆಸ್ಪತ್ರೆಗೆ ಎರಡೂವರೆ ಎಕರೆ ಎಂಬಂತೆ ಭೂಮಿ ಕೂಡಾ ಮಂಜೂರಾಗಿತ್ತು. ಆದರೆ ಕಾರಣಾಂತರಗಳಿಂದ ಆಸ್ಪತ್ರೆ ನಿರ್ಮಾಣ ನಿಂತು ಹೋಗಿದೆ.
ಈ ಕರೆಕಟ್ಟೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಾಗೀಶ್ ಎಂಬುವರ ಮನೆಯನ್ನು ಬಾಡಿಗೆ ಪಡೆದು ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದ ಐದು ಸಾವಿರ ಬಾಡಿಗೆಯನ್ನು ಮಾಲೀಕರಿಗೆ ಸಂದಾಯ ಮಾಡಲಾಗುತ್ತಿದೆ. ಒಂದೆರಡು ತಿಂಗಳು ಬಾಡಿಗೆ ಕಟ್ಟಲಿಲ್ಲ ಎಂದರೆ ಆಸ್ಪತ್ರೆಗೆ ಬೀಗ ಜಡಿದಿರುವ ಘಟನೆ ನಾಲ್ಕೈದು ಬಾರಿ ನಡೆದಿದ್ದೂ ಕೂಡಾ ಇದೆ. ಬೀಗ ಹಾಕಿದಾಗ ಸಿಬ್ಬಂದಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಸಾಕಷ್ಟು ಬಾರಿ ನಿರ್ಮಾಣ ಆಗಿದೆಯಂತೆ.
ಪಿಹೆಚ್ಸಿ ಆರೋಗ್ಯಾಧಿಕಾರಿ ಡಾ. ಮೇಘನಾ ಇನ್ನು ಈ ಆಸ್ಪತ್ರೆ ಮಹೀಮಾ ಪಟೇಲ್ ಅವರು ಶಾಸಕರಿದ್ದಾಗ ಮಂಜೂರಾಗಿತ್ತು. ಬಳಿಕ ಕಾಂಗ್ರೆಸ್ನಿಂದ ವಡ್ನಾಳ್ ರಾಜಣ್ಣ, ಬಿಜೆಪಿಯಿಂದ ಮಾಡಾಳ್ ವಿರೂಪಾಕ್ಷಪ್ಪ ಶಾಸಕರಾಗಿ ಬಂದು ಹೋದ್ರು ಸರ್ಕಾರಿ ಕಟ್ಟಡ ಮಾತ್ರ ದೊರಕಿಲ್ಲ. ಇದೀಗ ಹಾಲಿ ಶಾಸಕ ಶಿವಗಂಗಾ ಬಸವರಾಜ್ ಅವರು ಸಂಬಂಧ ಪಟ್ಟ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗ್ತಿಲ್ಲ ಎಂದು ಸ್ವತಃ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.
’ಎಷ್ಟೋ ಬಾರಿ ನಾನೇ ಬೀಗ ತೆಗೆಸಿದ್ದೇನೆ‘: ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯಿಸಿ, ''ಇದನ್ನು ಹೇಳಲು ನನಗೆ ನಾಚಿಕೆ ಆಗುತ್ತದೆ. ಸ್ವಾತಂತ್ರ್ಯ ಬಂದು ವರ್ಷಗಳೇ ಉರುಳಿದರೂ ಸ್ವತಃ ಕಟ್ಟಡ ಇಲ್ಲದೇ ಇರುವುದು ನಾಚಿಕೆಗೇಡು. ಬಾಡಿಗೆ ಸಂದಾಯ ಆಗಲಿಲ್ಲ ಎಂದರೆ ಮಾಲೀಕ ಬೀಗ ಹಾಕ್ತಾರೆ. ಎಷ್ಟೋ ಬಾರಿ ನಾನೇ ಬೀಗ ತೆಗೆಸುತ್ತೇನೆ. ಇದು ಅಧಿಕಾರಿಗಳ ವೈಫಲ್ಯ" ಎಂದು ಬೇಸರ ಕೂಡಾ ವ್ಯಕ್ತಪಡಿಸಿದ್ದಾರೆ.
ಗ್ರಾ ಪಂ ಅಧ್ಯಕ್ಷೆ ಹೇಳಿದ್ದೇನು? : ಈ ವಿಚಾರಕ್ಕೆ ಸಂಬಂಧಿಸಿದಂತೆ ಕರೆಕಟ್ಟೆ ಗ್ರಾಪಂ ಅಧ್ಯಕ್ಷೆ ಫರ್ಹಾನ ಝೆಹ್ರೂನ್ ಮಿರ್ಜಾ ಪ್ರತಿಕ್ರಿಯಿಸಿ, "ಕರೆಕಟ್ಟೆ ಗ್ರಾಮದಲ್ಲಿ ಆರು ಸಾವಿರ ಜನಸಂಖ್ಯೆ ಇದ್ದು, ಪಿಹೆಚ್ಸಿಗೆ ಸ್ವಂತ ಕಟ್ಟಡ ಇಲ್ಲ. ಬಾಡಿಗೆ ಮನೆ ಪಡೆದು ಆಸ್ಪತ್ರೆ ನಡೆಸುತ್ತಿದ್ದೇವೆ. ಗೋಮಾಳ ಜಾಗದಲ್ಲಿ ಆಸ್ಪತ್ರೆ ಕಟ್ಟುತ್ತಿದ್ದೆವು. ಅದು ಕಾರಣಾಂತರಗಳಿಂದ ನಿಲ್ಲಿಸಲಾಗಿದೆ. ಶಾಸಕರಾದ ಶಿವಗಂಗಾ ಬಸವರಾಜ್ ಅವರು ಆಸ್ಪತ್ರೆ ಕಟ್ಟಿಸುವ ಭರವಸೆ ನೀಡಿದ್ದಾರೆ. ಹತ್ತು ವರ್ಷದಿಂದ ಬಾಡಿಗೆ ಮನೆಯಲ್ಲಿ ಆಸ್ಪತ್ರೆ ನಡೆಸಲಾಗ್ತಿದೆ. ಬಾಡಿಗೆ ಹಣ ಐದು ಸಾವಿರ ಪಂಚಾಯಿತಿಯಿಂದ ಸಂದಾಯ ಆಗುತ್ತೆ. ಬಾಡಿಗೆ ಹಣವನ್ನು ಸರಿಯಾದ ಸಮಯಕ್ಕೆ ಕೊಡಲಿಲ್ಲ ಎಂದರೆ ಮಾಲೀಕರು ಸಾಕಷ್ಟು ಬಾರಿ ಬೀಗ ಹಾಕಿರುವ ಉದಾಹರಣೆ ಇದೆ. ನಮಗೆ ಒಂದು ಪಿಹೆಚ್ಸಿಗೆ ಸ್ವಂತ ಕಟ್ಟಡ ಬೇಕೇ ಬೇಕು ಎಂದರು.
ನಮಗೆ ಕೆಲಸ ಮಾಡಲು ಸಮಸ್ಯೆ ಆಗ್ತಿದೆ -ಪಿಹೆಚ್ಸಿ ಆರೋಗ್ಯಾಧಿಕಾರಿ: ಪಿಹೆಚ್ಸಿ ಆರೋಗ್ಯಾಧಿಕಾರಿ ಡಾ. ಮೇಘನಾ ಅವರು ಮಾತನಾಡಿ, ''ನಮಗೆ ಕಟ್ಟಡದ್ದೇ ದೊಡ್ಡ ಸಮಸ್ಯೆ. ಬಾಡಿಗೆ ಮನೆಯಲ್ಲಿ ಆಸ್ಪತ್ರೆ ನಡೆಸಲಾಗುತ್ತಿದೆ. ಇಕ್ಕಟ್ಟಾದ ಸ್ಥಳ ಆಗಿದ್ದರಿಂದ ಕೆಲಸ ಮಾಡಲು ಸಮಸ್ಯೆ ಆಗ್ತಿದೆ. ಪಿಹೆಚ್ಸಿ ಎಂದರೆ ಐದಾರು ಬೆಡ್ಗಳ ಆಸ್ಪತ್ರೆ ಇರಬೇಕು. ಆದರೆ ಈ ಮನೆಯಲ್ಲಿ ಆಸ್ಪತ್ರೆ ನಡೆಸುತ್ತಿರುವುದರಿಂದ ಎರಡೇ ಬೆಡ್ ಹಾಕಲಾಗಿದೆ. ಕಟ್ಟಡ ಇಲ್ಲದೇ ಇರುವುದರಿಂದ ಫ್ರೀಜರ್ ಪಾಯಿಂಟ್ ಕೊಟ್ಟಿಲ್ಲವಂತೆ. ಲ್ಯಾಬ್ ಕೆಲಸ ಮಾಡಲು ತುಂಬಾ ತೊಂದರೆಯಾಗುತ್ತಿದೆ. ಬಾಡಿಗೆ ಹಣ ಸಂದಾಯ ಆಗದೇ ಇದ್ದಾಗ ಆಸ್ಪತ್ರೆಗೆ ಬೀಗ ಹಾಕಲಾಗುತ್ತದೆ. ಇಲ್ಲಿ ದಿನಕ್ಕೆ 60-80 ರೋಗಿಗಳು ಬರುತ್ತಾರೆ ' ಎಂದಿದ್ದಾರೆ.
ಇದನ್ನೂ ಓದಿ :ಐತಿಹಾಸಿಕ ಗತವೈಭವ ಸಾರುವ ಚಿಟಗುಪ್ಪಿ ಆಸ್ಪತ್ರೆ ಇನ್ಮುಂದೆ ನೆನಪು ಮಾತ್ರ