ಮೈಸೂರು: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 7, 8 ಹಾಗೂ 9ನೇ ವಾರ್ಷಿಕ ಘಟಿಕೋತ್ಸವ ಜ. 18 ರಂದು ನಡೆಯಲಿದ್ದು, 9 ಸಾಧಕರಿಗೆ ಗೌರವ ಡಾಕ್ಟರೇಟ್, 540 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ. ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದರು.
ಗುರುವಾರ ವಿವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡುವರು. ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಘಟಿಕೋತ್ಸವ ಭಾಷಣ ಮಾಡಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
9 ಸಾಧಕರಿಗೆ ಗೌರವ ಡಾಕ್ಟರೇಟ್ : ಘಟಿಕೋತ್ಸವದಲ್ಲಿ 9 ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು. 2021-22ನೇ ಸಾಲಿನಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ನಟಿ ಗಿರಿಜಾ ಲೋಕೇಶ್, ಭರತನಾಟ್ಯ ಕಲಾವಿದ ಸತ್ಯನಾರಾಯಣರಾಜು, ವಿದ್ವಾನ್ ಸಿ. ಚೆಲುವರಾಜು, 2022-23ನೇ ಸಾಲಿನಲ್ಲಿ ಭರತನಾಟ್ಯ ಕಲಾವಿದೆ ಸಂಧ್ಯಾ ಪುರೆಚ, ಗಮಕ ವಿದ್ವಾನ್ ಎಂ. ಆರ್ ಸತ್ಯನಾರಾಯಣ, ಪ್ರದರ್ಶಕ ಕಲೆಗಳ ವಿಭಾಗದಿಂದ ಚಲನಚಿತ್ರ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ, 2023-24ನೇ ಸಾಲಿನಲ್ಲಿ ವಿದುಷಿ ವೀಣಾಮೂರ್ತಿ ವಿಜಯ್, ವಿದುಷಿ ಪುಷ್ಪಾ ಶ್ರೀನಿವಾಸನ್ ಹಾಗೂ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರಿಗೆ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
540 ವಿದ್ಯಾರ್ಥಿಗಳಿಗೆ ಪದವಿ : ಒಟ್ಟು 14 ಮಂದಿಗೆ ಡಿ.ಲಿಟ್ ಪದವಿ ನೀಡಲಾಗುವುದು. 27 ವಿದ್ಯಾರ್ಥಿಗಳು ಒಟ್ಟು 69 ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಮೂರು ವರ್ಷಗಳಲ್ಲಿ ಒಟ್ಟು 540 ಮಂದಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು. 2021-22ರ ಎಂಪಿವಿ ಕೋರ್ಸ್‌ನಲ್ಲಿ ಮೈಸೂರಿನ ವಿ. ವಿಜಯಶ್ರೀ 9 ಚಿನ್ನದ ಪದಕ ಪಡೆದಿದ್ದಾರೆ. 2022-23ರಲ್ಲಿ ಎಲ್. ಬಿ ಬಿಂದು 6, ಟಿ. ಎ ಕೀರ್ತನಾ 5, 2023-24ನೇ ಸಾಲಿನಲ್ಲಿ ಕೆ. ಆರ್ ಅಶ್ವಿನಿ ಹಾಗೂ ಬಿ. ಆರ್ ಮನೋಜ ತಲಾ 6 ಚಿನ್ನದ ಪದಕ ಪಡೆದಿದ್ದಾರೆ. ಸಿದ್ದಿ ಸಮಾಜದ ರೇಣುಕಾ ಸಿದ್ದಿ ನಾಟಕ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವುದು ವಿಶೇಷ ಎಂದು ತಿಳಿಸಿದರು.
ಬಿಪಿಎ ವಿಭಾಗದಲ್ಲಿ 2021-22ರಲ್ಲಿ ಡಿ. ಎಸ್ ಕಾವೇರಿ 3 ಹಾಗೂ ಎಸ್. ಎ ಅಶ್ವಿನಿ 2, 2022-23ರಲ್ಲಿ ಆರ್. ರಂಜಿನಿ ಶ್ರೀ 6, ಡಿ. ಎನ್ ಇಂದ್ರಕುಮಾರ್ 2, 2023-24 ರಲ್ಲಿ ಪಿ. ಆರ್ ರೂಪಾ 5 ಮತ್ತು ಬಿ. ಆರ್ ಶ್ರೀಹರಿ ಭಟ್ 2 ಚಿನ್ನದ ಪದಕ ಗಳಿಸಿದ್ದಾರೆ ಎಂದರು.
''ಮೈಸೂರು ತಾಲೂಕಿನ ನಾಡನಹಳ್ಳಿ ಬಳಿ ಐದೂವರೆ ಎಕರೆ ಜಾಗದಲ್ಲಿ ವಿವಿಯ ಕ್ಯಾಂಪಸ್ ನಿರ್ಮಾಣ ಮಾಡಲಾಗುವುದು. 10 ಕೋಟಿ ರೂ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಆಡಳಿತಾತ್ಮಕ ಬ್ಲಾಕ್, ತರಗತಿ ಕೊಠಡಿ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ'' ಎಂದು ಕುಲಪತಿ ಪ್ರೊ. ನಾಗೇಶ್ ವಿ ಬೆಟ್ಟಕೋಟೆ ತಿಳಿಸಿದರು.