ಬೆಳಗಾವಿ:ಹನಿಟ್ರ್ಯಾಪ್ ಪ್ರಕರಣವನ್ನು ಬೇಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಜಿಲ್ಲೆಯ ಟಿಳಕವಾಡಿಯ ಮಂಗಳವಾರಪೇಟೆ ನಿವಾಸಿ ವಿನಾಯಕ ಸುರೇಶ್ ಕುರಡೆಕರ್ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಶಾಹಪುರ ಠಾಣೆ ಪೊಲೀಸರು ಬುಧವಾರ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಬೆಳಗಾವಿಯ ಶಾಹಪುರದ ಬಸವಣಗಲ್ಲಿಯ ದಿವ್ಯಾ ಪ್ರದೀಪ್ ಸಪಕಾಳೆ, ಶಾಹಪುರ ಗಾಡೆ ಮಾರ್ಗದ ಪ್ರಶಾಂತ್ ಕಲ್ಲಪ್ಪ ಕೋಲಕಾರ್, ಕಣಬರಗಿಯ ಜ್ಯೋತಿರ್ಲಿಂಗ ಗಲ್ಲಿಯ ಕುಮಾರ್ ಅರ್ಜುನ್ ಗೋಕರಕ್ಕನವರ್, ವಾಲ್ಮೀಕಿ ಗಲ್ಲಿಯ ರಾಜು ಸಿದ್ರಾಯ ಜಡಗಿ ಬಂಧಿತರು.
ದೂರುದಾರ ವಿನಾಯಕ ಅವರಿಗೆ ಪರಿಚಯವಿದ್ದ ಆರೋಪಿ ದಿವ್ಯಾ ಜೊತೆಗಿನ ವಿಡಿಯೋವನ್ನೇ ಇಟ್ಟುಕೊಂಡು 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ಈಗಾಗಲೇ 15 ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಅಲ್ಲದೇ, ನನ್ನ ಅಪಹರಣ ಕೂಡ ಮಾಡಿದ್ದರು. ಇನ್ನುಳಿದ 10 ಲಕ್ಷ ರೂಪಾಯಿ ನೀಡುವಂತೆ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ವಿನಾಯಕ ಉಲ್ಲೇಖಿಸಿದ್ದಾರೆ.