ಕರ್ನಾಟಕ

karnataka

ದಕ್ಷಿಣ ಕನ್ನಡದಲ್ಲಿ ಶನಿವಾರವೂ ಶಾಲೆಗೆ ರಜೆ; ಬಂಟ್ವಾಳದಲ್ಲಿ ನೇತ್ರಾವತಿ ಅಬ್ಬರ, ಹಲವೆಡೆ ನುಗ್ಗಿದ ನೀರು - Schools Holiday

By ETV Bharat Karnataka Team

Published : Jul 19, 2024, 9:02 PM IST

ಭಾರಿ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರವೂ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

rain
ಮಳೆ ಅವಾಂತರ (ETV Bharat)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಜುಲೈ 20ರಂದು ರೆಡ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿವರೆಗೆ) ರಜೆ ಘೋಷಿಸಲಾಗಿದೆ.

ದುರ್ಬಲ, ಶಿಥಿಲ ಕಟ್ಟಡಗಳು ಇದ್ದಲ್ಲಿ ಪಾಠ, ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸಬೇಕು. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ ಸಮುದ್ರ ತೀರಕ್ಕೆ ಸಾರ್ವಜನಿಕರು, ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ, ತೋಡುಗಳ ಮತ್ತು ವಿದ್ಯುತ್ ಕಂಬ, ತಂತಿಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು. ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆಗಳು ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದರೆ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಬ್ಬರ, ಹಲವೆಡೆ ನುಗ್ಗಿದ ನೀರು:ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರೆದಿದ್ದು, ಗಾಳಿ, ಸಿಡಿಲು ಗುಡುಗು ಸಹಿತ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕಿನಲ್ಲಿ ಹರಿಯುವ ಜೀವನದಿ ನೇತ್ರಾವತಿ ಬಂಟ್ವಾಳ ಪೇಟೆಯ ತಗ್ಗು ಪ್ರದೇಶ, ಪಾಣೆಮಂಗಳೂರಿನ ಆಲಡ್ಕ ಸಹಿತ ಕೆಲವು ಭಾಗಗಳಲ್ಲಿ ರಸ್ತೆ, ಮನೆ, ಅಂಗಡಿ ಮುಂಗಟ್ಟುಗಳಿಗೆ ಪ್ರವೇಶಿಸಿದ್ದು, ತೀರ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಜಿಲ್ಲಾಧಿಕಾರಿ ಪರಿಶೀಲನೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಶುಕ್ರವಾರ ಮಧ್ಯಾಹ್ನ ಬಂಟ್ವಾಳದ ನೆರೆಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಆಲಡ್ಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು‌ ನುಗ್ಗುವ ಲಕ್ಷಣಗಳು ಕಂಡುಬರುವ ಮನೆಗಳಲ್ಲಿನ ಜನರನ್ನು ಹಗಲು ಹೊತ್ತಿನಲ್ಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಳಜಿ ‌ಕೇಂದ್ರದ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡರು.

ಆಲಡ್ಕ ಪ್ರದೇಶಕ್ಕೆ ಬೇಟಿ ನೀಡಿದ ಸಂದರ್ಭ ಜಿಲ್ಲಾಧಿಕಾರಿ ನೋಡಲು ಸ್ಥಳೀಯ ಮಕ್ಕಳು ಸೇರಿದ್ದರು. ಅವರ ಕೈಕುಲುಕಿದ ಜಿಲ್ಲಾಧಿಕಾರಿ ಅವರು ರಜೆ ನೀಡಿರುವುದು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳುವ ಉದ್ದೇಶದಿಂದ. ಹಾಗಾಗಿ, ನೀವು ನೀರಿನ ಹತ್ತಿರಕ್ಕೆ ನದಿ ತೀರಕ್ಕೆ ತೆರಳದೆ, ಮನೆಯಲ್ಲಿ ಜಾಗ್ರತೆ ವಹಿಸಿ ಎಂದು ಬುದ್ದಿಮಾತು ಹೇಳಿದರು.

ಇದನ್ನೂ ಓದಿ:ಉಡುಪಿ ಜಿಲ್ಲಾದ್ಯಂತ ಮಳೆಯ ಅಬ್ಬರ: ಮನೆ, ಬೆಳೆ, ಕೃಷಿಭೂಮಿಗೆ ಹಾನಿ - ನಾಳೆ ರೆಡ್ ಅಲರ್ಟ್ - heavy rain fall in udupi

ABOUT THE AUTHOR

...view details