ಬೆಂಗಳೂರು: ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿ ಬಳಸಿಕೊಂಡು ಶಿಲ್ಪಾ ಫೌಂಡೇಶನ್ ಸಂಸ್ಥೆ 1.30 ಕೋಟಿ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ನಗರದ 3 ಕಡೆಗಳಲ್ಲಿ ಸ್ಮಾರ್ಟ್ ನಿಲ್ದಾಣ ನಿರ್ಮಿಸಿದೆ. ಈ ಮೂಲಕ ರಾಜಧಾನಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆರಂಭಿಸಿರುವ ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಇನ್ನಷ್ಟು ಬಲ ನೀಡಿದಂತಾಗಿದೆ.
2024ರ ಜನವರಿಯಲ್ಲಿ ಕೆ.ಆರ್. ವೃತ್ತ, ಅಡುಗೋಡಿ, ಕಾಡುಬೀಸನಹಳ್ಳಿನಲ್ಲಿ ಸ್ಮಾರ್ಟ್ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಸದ್ಯ ಕಾಮಗಾರಿಗಳು ಮುಗಿದಿವೆ. ಈ ಯೋಜನೆಗೆ ಬಿಬಿಎಂಪಿ ಸಹ ಸಹಕಾರ ಕೊಟ್ಟಿದ್ದು, ನಿಲ್ದಾಣಗಳು ಪ್ರಸಕ್ತ ತಿಂಗಳಿನ 3ನೇ ವಾರದಲ್ಲಿ ಲೋಕಾರ್ಪಣೆಗೆ ಸಜ್ಜಾಗಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ನಂತರ ಸ್ಮಾರ್ಟ್ ನಿಲ್ದಾಣಗಳು ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿವೆ.
ಸ್ಮಾರ್ಟ್ ನಿಲ್ದಾಣದಲ್ಲಿ ಏನೆಲ್ಲ ಸೌಲಭ್ಯ?: ಸೇಪಿಯನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಎಸ್ಆರ್ ಅನುದಾನದಿಂದ ಶಿಲ್ಪಾ ಫೌಂಡೇಷನ್, ಪ್ರತಿ ಸ್ಮಾರ್ಟ್ ನಿಲ್ದಾಣಗಳಿಗೆ 43 ಲಕ್ಷ ರೂ. ವೆಚ್ಚ ಮಾಡಿದೆ. ನಿಲ್ದಾಣಗಳಲ್ಲಿ 360 ಡಿಗ್ರಿ ಸಿಸಿ ಕ್ಯಾಮರಾ, ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಮೊಬೈಲ್, ಲ್ಯಾಪ್ಟಾಪ್ ಚಾರ್ಜರ್, ಸ್ನ್ಯಾಕ್ ವೆಂಡರ್ ಮಷಿನ್, ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್, ಹಸಿ, ಒಣ ಕಸ ಹಾಕುವ ಡಬ್ಬಿ, ಬಸ್ಗಳು ಸಾಗುವ ಮಾರ್ಗದ ಫಲಕ, ಗುಣಮಟ್ಟ ಅಸನಗಳು, ಕುಡಿಯುವ ನೀರು, ವಿದ್ಯುದ್ದೀಪ ಹಾಗೂ ಸರ್ಕಾರದ ಯೋಜನೆಗಳ ವಿವರ ಮತ್ತು 4 ಡಿಸ್ಪ್ಲೇಗಳು ಸೇರಿ ಇತರೆ ಸೌಲಭ್ಯಗಳಿವೆ. ಸ್ಮಾರ್ಟ್ ನಿಲ್ದಾಣವನ್ನು ಸಂಸ್ಥೆಯೇ ನಿರ್ವಹಣೆ ಮಾಡಲಿದೆ. ಹಂತ - ಹಂತವಾಗಿ ನಗರದ ಇತರ ಕಡೆಗಳಲ್ಲೂ ಉಚಿತವಾಗಿ ಸ್ಮಾರ್ಟ್ ನಿಲ್ದಾಣ ನಿರ್ಮಿಸುವ ಗುರಿಯನ್ನು ಶಿಲ್ಪಾ ಫೌಂಡೇಶನ್ ಹಾಕಿಕೊಂಡಿದೆ.
ಪ್ಯಾನಿಕ್ ಬಟನ್ ಅಳವಡಿಕೆ: ಸ್ಮಾರ್ಟ್ ನಿಲ್ದಾಣದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಸುರಕ್ಷತೆಗೆ ಪ್ಯಾನಿಕ್ ಬಟನ್ ಅಳವಡಿಸಲಾಗಿದೆ. ಬಸ್ಗಾಗಿ ಕಾಯುತ್ತಿರುವ ಹೆಣ್ಣು ಮಕ್ಕಳು, ಮಹಿಳೆಯರು ಕಿಡಿಗೇಡಿಗಳಿಂದ ಅನುಚಿತ ವರ್ತನೆ, ಲೈಂಗಿಕ ಕಿರುಕುಳಕ್ಕೆ ಒಳಗಾದರೆ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ರವಾನೆಯಾಗಲಿದೆ. ಸಂಬಂಧಪಟ್ಟ ಪೊಲೀಸರು ಕಾರ್ಯಪ್ರವೃತರಾಗಿ ಕೆಲ ನಿಮಿಷಗಳಲ್ಲೇ ಸ್ಥಳಕ್ಕೆ ಧಾವಿಸಲಿದ್ದಾರೆ. ಹಾಗಾಗಿ, ಇಲ್ಲಿಂದ ಹಗಲು ಅಥವಾ ರಾತ್ರಿ ವೇಳೆ ಯಾವುದೇ ಭಯವಿಲ್ಲದೆ ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ.
ಶಿಲ್ಪಾ ಫೌಂಡೇಷನ್ ಸಂಸ್ಥಾಪಕರು ಹೇಳುವುದೇನು?: ''ಕಂಪನಿಯ ಆದಾಯದಲ್ಲಿ ಸ್ವಲ್ಪ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದೇವೆ. ಅದರಂತೆ, ನಮ್ಮ ಫೌಂಡೇಷನ್ನಿಂದ ಪ್ರಾಯೋಗಿಕವಾಗಿ ನಗರದ ಮೂರು ಕಡೆ ಸ್ಮಾರ್ಟ್ ನಿಲ್ದಾಣ ನಿರ್ಮಿಸಲಾಗಿದೆ. ಸ್ವಂತ ಹಣದಲ್ಲೇ ನಿಲ್ದಾಣಗಳನ್ನು ನಿರ್ಮಿಸಿದ್ದು, ನಿರ್ವಹಣೆಯನ್ನೂ ನಾವೇ ಮಾಡುತ್ತೇವೆ. ಇದಕ್ಕಾಗಿ ಸಿಬ್ಬಂದಿ ನಿಯೋಜಿಸಲಾಗಿದೆ'' ಎಂದು ಶಿಲ್ಪಾ ಫೌಂಡೇಶನ್ ಸಂಸ್ಥಾಪಕ ಶಿ. ಅಚ್ಚುತ್ಗೌಡ ಹೇಳಿದ್ದಾರೆ.
''ಈ ಮೂಲಕ ಸರ್ಕಾರಕ್ಕೆ, ಬಿಬಿಎಂಪಿಗೆ ಚಿಕ್ಕ ಕೊಡುಗೆ ನೀಡಲು ಉತ್ಸುಕರಾಗಿದ್ದೇವೆ. ಜನರಿಗೆ ಒಳ್ಳೆಯ ಸೇವೆ ದೊರೆಯಬೇಕೆಂಬುದು ನಮ್ಮ ಆಶಯವಾಗಿದೆ. ಬರುವ ದಿನಗಳಲ್ಲಿ ಸರ್ಕಾರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಇನ್ನಷ್ಟು ಸ್ಮಾರ್ಟ್ ನಿಲ್ದಾಣಗಳನ್ನು ನಿರ್ಮಿಸಲು ಆಲೋಚಿಸಲಾಗಿದೆ. ನಿಲ್ದಾಣದಲ್ಲಿ ಸುಗಮ ಪ್ರಯಾಣಕ್ಕೆ, ಮಹಿಳೆಯರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ'' ಎಂದು ಶಿ. ಅಚ್ಚುತ್ಗೌಡ ತಿಳಿಸಿದ್ದಾರೆ.