ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳ್ಚಿ ಗ್ರಾಮದ ಬಳಿ ಇರುವ ಸೂಳೆಕೆರೆ (ಶಾಂತಿಸಾಗರ) ಏಷ್ಯಾದ ಎರಡನೇ ಅತಿದೊಡ್ಡ ಕೆರೆ. ಅಚ್ಚಹಸಿರಿನಿಂದ ಕಂಗೊಳಿಸುವ ಎರಡು ಬೆಟ್ಟಗಳು ನಡುವೆ ಮೈದುಂಬಿರುವ ಸೂಳೆಕೆರೆ ರೈತರ ಜೀವನಾಡಿ ಮತ್ತು ನೂರಾರು ಹಳ್ಳಿಗಳಿಗೆ ನೀರುಣಿಸುವ ಜೀವಸೆಲೆ. ಅಷ್ಟೇ ಅಲ್ಲ ಪ್ರವಾಸಿಗರ ಆಕರ್ಷಣೀಯ ತಾಣವೂ ಹೌದು.
ಸೂಳೆಕೆರೆ (ಶಾಂತಿಸಾಗರ) ಇತಿಹಾಸ ಹೀಗಿದೆ:'ಶಾಂತಿಸಾಗರ' ನಿರ್ಮಾಣದ ಹಿಂದೆ ಒಂದು ಇತಿಹಾಸ ಅಡಗಿದೆ. ಕೆರೆ ಇರುವ ಪ್ರದೇಶದಲ್ಲಿ ಹಿಂದೆ 'ಸ್ವರ್ಗಾವತಿ' ಎಂಬ ಪಟ್ಟಣ ಇತ್ತು ಎಂದು ಹಿರಿಯರು ಹೇಳುತ್ತಿದ್ದಾರೆ. ಈ ಸ್ವರ್ಗಾವತಿ ಎಂಬ ಪುಟ್ಟ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ರಾಜ 'ವಿಕ್ರಮರಾಯ' ಆತನ ಪತ್ನಿ ನೂತನಾ ದೇವಿಗೆ ಮಕ್ಕಳಿರಲಿಲ್ಲ, ಬಹಳ ವರ್ಷಗಳ ಬಳಿಕ ಹೆಣ್ಣು ಮಗು ಜನನವಾಯಿತು ಎಂದು ಇತಿಹಾಸ ತಜ್ಞರ ಮಾತು.
ನೂರಾರು ಹಳ್ಳಿಗೆ ನೀರುಣಿಸುವ ಸೂಳೆಕೆರೆ (ETV Bharat) ಆ ಹೆಣ್ಣು ಮಗುವಿಗೆ ಶಾಂತಲಾದೇವಿ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು. ಶಾಂತವ್ವ ಎಂದೂ ಕರೆಯುತ್ತಿದ್ದರು. ಶಾಂತವ್ವಳ ನಡತೆ ಸರಿ ಇರದ ಕಾರಣ ತಂದೆ ವಿಕ್ರಮರಾಯ ನಡತೆಗೆಟ್ಟವಳು ಎಂದು ನಿಂದಿಸಿದ್ದನಂತೆ. ಸೂಳೆ ಎಂಬ ತಂದೆ ವಿಕ್ರಮರಾಯನ ಆರೋಪದಿಂದ ಶಾಂತವ್ವ ಮುಕ್ತಳಾಗಲು, ಕಳಂಕವನ್ನು ಹೋಗಲಾಡಿಸಲು ಹಾಗೂ ಆ ಭಾಗದ ಜನರಲ್ಲಿ ಕಾಡುತ್ತಿದ್ದ ನೀರಿನ ಬವಣೆ ಹೋಗಲಾಡಿಸಲು ಕೆರೆ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತಾಳೆ ಅದುವೆ ಸೂಳೆಕೆರೆ.
ವೇಶ್ಯೆಯರು ವಾಸಿಸುತ್ತಿದ್ದ ಪ್ರದೇಶದಲ್ಲೇ ಕೆರೆ ನಿರ್ಮಾಣ:ಶಾಂತವ್ವ ಸ್ವರ್ಗವತಿ ಪಟ್ಟಣದ ಒಂದು ಕಡೆ ವೇಶ್ಯೆಯರೇ ಹೆಚ್ಚು ವಾಸಿಸುತ್ತಿದ್ದ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾಗಿದ್ದಳು. ಈ ಜಾಗವನ್ನು ಕೆರೆ ನಿರ್ಮಾಣಕ್ಕೆ ಬಿಟ್ಟುಕೊಡಲು ವೇಶ್ಯೆಯರಿಗೆ ಶಾಂತವ್ವ ಮನವಿ ಕೂಡ ಮಾಡಿದ್ದಳು ಎಂದು ಇತಿಹಾಸ ಸಾರುತ್ತದೆ. ಆಗ ವೇಶ್ಯೆಯರು ಈ ಕೆರೆಗೆ 'ಸೂಳೆಕೆರೆ' ಎಂದು ನಾಮಕರಣ ಮಾಡಿದರೆ ಮಾತ್ರ ಪ್ರದೇಶವನ್ನು ಬಿಟ್ಟು ಕೊಡುವುದಾಗಿ ಷರತ್ತು ವಿಧಿಸಿದರು. ಆ ಒಂದು ಷರತ್ತು ಒಪ್ಪಿದ ರಾಜಪುತ್ರಿ ಶಾಂತವ್ವ ಕೆರೆ ನಿರ್ಮಾಣ ಮಾಡಿದ್ದರು. ಅಲ್ಲಿಂದ ಸೂಳೆಕೆರೆ ಎಂಬ ಹೆಸರು ಬಂದಿದೆ ಎಂದು ಇತಿಹಾಸಕಾರರು, ಸ್ಥಳೀಯರು, ಪೂರ್ವಜರು ಹೇಳುತ್ತಾರೆ. ವೇಶ್ಯೆ ಒಬ್ಬ ಶುಭ್ರ ಮನಸ್ಸಿನ ಶ್ರೇಷ್ಠಳು. ತ್ಯಾಗದ ಸಂಕೇತದ ಸಮಾನಳು ಎಂಬ ಪೂಜ್ಯ ಭಾವನೆ ಈ ಭಾಗದ ಜನರಲ್ಲಿ ಈಗಲೂ ಇದೆ.
ಶಾಂತವ್ವ ನಿರ್ಮಿಸಿದ 'ಸೂಳೆಕೆರೆ' (ETV Bharat) ಈ ಕೆರೆಯ ಆಳ ಅಗಲ ಹೀಗಿದೆ:11-12ನೇ ಶತಮಾನದಲ್ಲಿ ಕೆರೆ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಬೃಹತ್ ಕೆರೆಯ ನಿರ್ಮಾಣಕ್ಕೆ ಮೂರು ವರ್ಷ ಬೇಕಾಯಿತು. 6,550 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, 64 ಕಿಮೀ ಸುತ್ತಳತೆ ಹೊಂದಿದೆ. ಈ ಕೆರೆ 18,483 ಜಲಾನಯನ ಪ್ರದೇಶವನ್ನು ಹೊಂದಿದೆ. ಇದು 6,000 ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ. ಮತ್ತು 1 ಸಾವಿರಕ್ಕೂ ಹೆಚ್ಚು ಹಳ್ಳಿಗಳು ಕೆರೆಯ ನೀರಿನಿಂದ ಪ್ರಯೋಜನ ಪಡೆಯುತ್ತವೆ ಎಂದು ರೈತ ಮುಖಂಡರು ಹೇಳುತ್ತಾರೆ.
ಕೆರೆ ನಿರ್ಮಿಸಲು ಅಸಾಧ್ಯ ಎಂದಿದ್ದ ಬ್ರಿಟಿಷ್ ಇಂಜಿನಿಯರ್ ಸ್ಯಾಂಕಿ:ಬ್ರಿಟಿಷ್ ಇಂಜಿನಿಯರ್ ಒಬ್ಬ ಈ ಕೆರೆ ನಿರ್ಮಾಣ ಅಸಾಧ್ಯದ ಮಾತು ಎಂದು ಹೇಳಿದ್ದರು. ಅಂದಿನ ಮೈಸೂರು ರಾಜ್ಯದ ಮುಖ್ಯ ಇಂಜಿನಿಯರ್ ಆಗಿದ್ದ 'ರಿಚರ್ಡ್ ಹಿರಮ್ ಸ್ಯಾಂಕಿ' 1856ರಲ್ಲಿ ಭೇಟಿ ನೀಡಿದ್ದರಂತೆ. ಇಂತಹ ಸ್ಥಳದಲ್ಲಿ ಕೆರೆ ನಿರ್ಮಾಣ ಅಸಾಧ್ಯದ ಮಾತು ಎಂದು ಹೇಳಿದ್ದರಂತೆ. ಆದರೆ ಇಲ್ಲಿ ಕೆರೆ ನಿರ್ಮಿಸಲಾಗಿದೆ.
ಹರಿದ್ರಾವತಿ ನದಿಯೇ ಈ ಕೆರೆಗೆ ನೀರಿನ ಮೂಲ:ಈ ಸೂಳೆಕೆರೆಗೆ ತುಂಗಭದ್ರೆಯ ಉಪನದಿಯಾದ ಹರಿದ್ರಾವತಿ ಎಂಬ ನದಿ ನೀರಿನ ಮೂಲ ಆಗಿತ್ತು. ನೂರಾರು ಗ್ರಾಮಗಳ ತೊರೆಗಳು, ಹಳ್ಳಗಳಿಂದ ಬರುವ ನೀರು ಈ ಕೆರೆಗೆ ಸೇರುತ್ತಿತ್ತು. ಇದೀಗ ಇಲ್ಲಿಗೆ ಭದ್ರಾ ಅಣೆಕಟ್ಟಿನ ಬಲದಂಡೆ ಕಾಲುವೆಯಿಂದ ನೀರನ್ನು ಹರಿಸಲಾಗುತ್ತಿದೆ. ಎರಡು ಸುಂದರ ಬೆಟ್ಟಗಳ ನಡುವೆ ಒಡ್ಡು ನಿರ್ಮಿಸಿ ನೀರನ್ನು ನಿಲ್ಲಿಸಲಾಗಿದೆ. ಈ ಕೆರೆಗೆ ಸುಮಾರು 950 ಅಡಿ ಉದ್ದದ ಏರಿಯಾ ನಿರ್ಮಾಣ ಮಾಡಿ ನೀರು ನಿಲ್ಲಿಸಲಾಗಿದೆ. ಏರಿಯ ಅಗಲ ಒಂದೆಡೆ 60 ಅಡಿ ಇದ್ದರೆ, ಇನ್ನೊಂದೆಡೆ 80 ಅಡಿಗಳಷ್ಟಿದೆ. ವಿಸ್ತಾರವಾದ ಬೆಟ್ಟದ ಸಾಲುಗಳ ಪ್ರದೇಶದಲ್ಲಿ ಕೆರೆ ಇದ್ದು, ಸುತ್ತಮುತ್ತಲಿನ ನೂರಾರು ಹಳ್ಳಿಗಳಿಂದ ಮಳೆ ನೀರು ಈ ಕೆರೆಗೆ ಬಂದು ಸೇರುತ್ತದೆ. ಇನ್ನು ಈ ಕೆರೆಯ ಉತ್ತರಕ್ಕೆ 'ಸಿದ್ಧನ ತೂಬು'ಮತ್ತು ಕೆರೆಯ ದಕ್ಷಿಣಕ್ಕೆ 'ಬಸವ ತೂಬ' ಅಳವಡಿಕೆ ಮಾಡಲಾಗಿದೆ. ಇದೇ ತೂಬುಗಳಿಂದ ಕೃಷಿ ಭೂಮಿಗಳಿಗೆ ನೀರಿ ಹರಿಸಲಾಗುತ್ತದೆ.
ಹಿರಿಯ ರೈತ ಮುಖಂಡರು ಕೆರೆ ಬಗ್ಗೆ ಹೇಳುವುದೇನು?:ಹಿರಿಯ ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಅವರು ಪ್ರತಿಕ್ರಿಯಿಸಿ "ಸೂಳೆಕೆರೆಗೆ 800 ವರ್ಷದ ಇತಿಹಾಸ ಇದೆ. ಅಂದಿನ ಕಾಲದ ಅರಸ ವಿಕ್ರಮರಾಯ, ವಿನೂತನ ದೇವಿಗೆ ಮಕ್ಕಳಾಗಿರಲಿಲ್ಲ. ಬಹಳ ದಿನಗಳ ನಂತರ ಹೆಣ್ಣು ಮಗು ಜನನವಾಗಿತ್ತು. ಜನಿಸಿದ ಮಗುಗೆ ಶಾಂತವ್ವ ಎಂದು ಹೆಸರಿಟ್ಟರು, ರಾಜ್ಯದಲ್ಲಿ ನೀರಿನ ಬಣೆ ನೋಡಲಾಗದೇ ಒಂದು ತೊಟ್ಟಿ ಆಕಾರದ ಕೆರೆ ಕಟ್ಟಿಸಿದ್ದರು. ಎರಡು ಗುಡ್ಡಗಳ ಮಧ್ಯೆ ಇರುವ ಪುಟ್ಟಕೆರೆ ಬರ್ತಾ ಬರ್ತಾ ದೊಡ್ಡಕೆರೆಯಾಗಿ ವಿಸ್ತರಣೆಯಾಗಿ ಇಡೀ ರಾಜ್ಯವನ್ನೇ ಮುಳುಗಿಸಿತ್ತು. ಆಗ ರಾಜ ವಿಕ್ರಮರಾಯನು ಶಾಂತವ್ವಳಿಗೆ ಸಿಟ್ಟಿನಲ್ಲಿ ರಾಜ್ಯ ಮುಳುಗಿಸಿದ್ದರಿಂದ ಸೂಳೆ ಎಂದು ಕರೆದಿರುವುದು ಇತಿಹಾಸ, ಅಂದಿನಿಂದ ಕೆರೆಗೆ ಸೂಳೆಕೆರೆ ಹೆಸರು ಬಂತು ಎಂದು ತಿಳಿಸಿದರು.
ಶಾಂತವ್ವ ನಿರ್ಮಿಸಿದ 'ಸೂಳೆಕೆರೆ' (ETV Bharat) ಹೆಸರು ಮರುನಾಮಕರಣ ಮಾಡಿದ್ದರು ದಿ. ಸಿಎಂ ಜೆ.ಹೆಚ್.ಪಟೇಲ್:ಜೆಹೆಚ್ ಪಟೇಲ್ ಅವರು ಸಿಎಂ ಆಗಿದ್ದಾಗ ಇದಕ್ಕೆ ಶಾಂತಿಸಾಗರ ಎಂದು ಮರುನಾಮಕರಣ ಮಾಡಿದ್ದರು. ಇದಕ್ಕೆ ತುಂಗಭದ್ರಾ ನದಿಯ ಉಪನದಿ ಹರಿದ್ರಾವತಿ ನದಿ, ತೊರೆಗಳು ನೀರಿನ ಮೂಲ ಆಗಿದೆ. ಇಂದಿಗೂ ಹರಿದ್ರಾವತಿ ನದಿ ನೀರು ಹರಿದು ಬರುತ್ತದೆ. ಐವತ್ತು ಹಳ್ಳಿಗಳಿಗೆ, ಜಗಳೂರು, ಚಿತ್ರದುರ್ಗ, ಹೊಳಲ್ಕೆರೆಗೆ ಕುಡಿಯುವ ನೀರು ಸರಬರಾಜು ಆಗ್ತಿದೆ. ದಾವಣಗೆರೆಯಿಂದ 40 ಕಿಮೀ ದೂರ ಇದೆ. ಕೆರೆಬಿಳ್ಚಿ ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರವಾಸೋದ್ಯಮಕ್ಕೆ ಒತ್ತು ಕೊಡಲಾಗಿದೆ. ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ, ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕೂಡ ಹೌದು ಎಂದು ಹೇಳಿದರು.
ಶಾಂತವ್ವ ನಿರ್ಮಿಸಿದ 'ಸೂಳೆಕೆರೆ' (ETV Bharat) ಮಾವು ಅಡಿಕೆಗೆ ವರದಾನ ಆಗ್ತಿದೆ ಕೆರೆ ನೀರು:ಈ ಸೂಳೆಕೆರೆಯು ಮಾವು, ಭತ್ತ, ಅಡಿಕೆಗೆ ವರದಾನ ಆಗ್ತಿದೆ. ಐವತ್ತು ವರ್ಷಗಳಿಂದ ಈ ಕೆರೆ ನೋಡುತ್ತಿದ್ದೇನೆ. 2000 ಎಕರೆ ಅಡಿಕೆ ತೋಟ, 500 ಎಕರೆ ಮಾವು ಹಾಗೂ ಭತ್ತಕ್ಕೆ ಆಸರೆಯಾಗಿದೆ. ರೈತರಿಗೆ ವರದಾನ ಆಗಿದೆ. ಹೆಕ್ಟೇರ್ ಗಟ್ಟಲೆ ಭೂಮಿ ಒತ್ತುವರಿಯಾಗಿದ್ದು, ತೆರವು ಮಾಡಲು ಸರ್ಕಾರಕ್ಕೆ ಮನವಿ ಮಾಡಬೇಕಿದೆ. ಕೆರೆಯಲ್ಲಿ ಹೂಳು ಹೆಚ್ಚಿದ್ದು ತೆಗೆಸಬೇಕಾಗಿದೆ. ಇತಿಹಾಸದಲ್ಲಿ ಯಾವುದೇ ಕಾರಣಕ್ಕೂ ಕೆರೆ ಸಂಪೂರ್ಣವಾಗಿ ಬತ್ತಿಲ್ಲ. ಕೆಲ ವರ್ಷಗಳ ಹಿಂದೆ ಜಾನುವಾರು, ಅಡಿಕೆ ತೋಟಕ್ಕೆ ಸಮಸ್ಯೆ ಆಗಿತ್ತು. ಬತ್ತಿ ಹೋಗಿರುವ ಇತಿಹಾಸ ಇಲ್ಲ. ರೈತರಿಗೆ ವರದಾನ ಕೆರೆ ಎಂದು ಚಂದ್ರನಹಳ್ಳಿ ರೈತ ಮಲ್ಲಿಕಾರ್ಜುನ್ ತಿಳಿಸಿದರು.
ಇದನ್ನೂ ಓದಿ:ಗುಜ್ಜರಕೆರೆಯಲ್ಲಿ ಅಪಾಯಕಾರಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ: 10 ಕೋಟಿ ಖರ್ಚು ಮಾಡಿದರೂ ಶುದ್ಧವಾಗದ ಕೆರೆ ನೀರು