ವಿಶೇಷ ವರದಿ- ಶಿವಕುಮಾರ್ ಸಿ.ಹೆಚ್
ಹಾವೇರಿ/ಮೈಲಾರ:ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಕುರುಬ ಸಮಾಜದ ಆರಾಧ್ಯದೈವ. ಇಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಸೇರಿದಂತೆ ನೆರೆ ರಾಜ್ಯಗಳಿಂದಲ್ಲದೇ ಇತರ ಧರ್ಮಗಳ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಮೈಲಾರ ಕಾರ್ಣಿಕ - ತ್ರೇತಾಯುಗದಲ್ಲೇ ಆರಂಭ (ETV Bharat) ಉತ್ತರ ಕರ್ನಾಟಕದಲ್ಲಿಯೇ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿರುವ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಉಳಿದ ಜಾತ್ರೆಯಂತೆ ರಥೋತ್ಸವ ನಡೆಯುವುದಿಲ್ಲ. ಬದಲಿಗೆ ಇಲ್ಲಿ ಗೊರವಯ್ಯ ಸುಮಾರು 18 ಅಡಿಯ ಬಿಲ್ಲನೇರಿ ಪ್ರಸ್ತುತ ವರ್ಷದ ಕಾರ್ಣಿಕ ನುಡಿಯುತ್ತಾನೆ. ಮೈಲಾರದ ಡೆಂಕನಮರಡಿಯಲ್ಲಿ ನಡೆಯುವ ಕಾರ್ಣಿಕೋತ್ಸವ ಈ ಜಾತ್ರೆಯ ಪ್ರಮುಖ ಘಟ್ಟ. ಈ ಕಾರ್ಣಿಕ ಕೇಳಲು 5 ಲಕ್ಷಕ್ಕೂ ಅಧಿಕ ಭಕ್ತರು ಡೆಂಕನಮರಡಿಯಲ್ಲಿ ಸೇರುತ್ತಾರೆ. ಕಳೆದ ಶುಕ್ರವಾರ 'ತುಂಬಿದ ಕೊಡ ತುಳುಕಿತಲೇ ಪರಾಕ್' ಎಂದು ಈ ವರ್ಷದ ಕಾರ್ಣಿಕವನ್ನು ಗೊರವಯ್ಯ ನುಡಿದಿದ್ದಾರೆ.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಭಾಗಿಯಾಗಿದ್ದ ಗೊರವಪ್ಪಗಳು (ETV Bharat) ಪ್ರಮುಖ ಕಾರ್ಣಿಕ ನುಡಿದ ವರ್ಷಗಳಲ್ಲಿ ನಡೆದ ಘಟನೆಗಳು:19ನೇ ಶತಮಾನದಿಂದ ಇಲ್ಲಿ ಕಾರ್ಣಿಕ ನುಡಿಯನ್ನು ದಾಖಲಿಸಲಾಗುತ್ತಿದೆ. 1900 ರಿಂದ 2025 ರವರೆಗೆ ನಡೆದ ಕಾರ್ಣಿಕ ನುಡಿಗಳು ದೇವಸ್ಥಾನದಲ್ಲಿ ನಮಗೆ ಸಿಗುತ್ತವೆ.
- ಗೊರವಯ್ಯ 1857ರಲ್ಲಿ ಕೆಂಪುನೊಣಗಳಿಗೆ ಕಷ್ಟಪ್ರಾಪ್ತಿಯಾಯಿತಲೇ ಪರಾಕ್ ಎಂದು ನುಡಿದಿದ್ದರು. ಆ ವರ್ಷ ಸಿಪಾಯಿ ದಂಗೆಯಾಗಿ ಬ್ರಿಟಿಷರು ಇನ್ನಿಲ್ಲದ ಸಂಕಷ್ಟ ಎದುರಿಸಿದ್ದರು.
- 1984 ರಲ್ಲಿ ಮರ್ತಕ್ಕೆ ಮಬ್ಬು ಗವಿಯತಲೇ ಪರಾಕ್ ಎಂದು ನುಡಿಯಲಾಗಿತ್ತು ಆ ವರ್ಷ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಯಿತು.
- 1991ರಲ್ಲಿ ಮುತ್ತಿನ ರಾಶಿ ಮೂರು ಚೂರಾಯಿತಲೇ ಪರಾಕ್ ಎಂದು ಕಾರ್ಣಿಕ ನುಡಿಯಲಾಗಿತ್ತು. ಆ ವರ್ಷ ಪ್ರಧಾನಿ ರಾಜೀವಗಾಂಧಿ ಬಾಂಬ್ ಸ್ಪೋಟದಲ್ಲಿ ಸಾವನ್ನಪ್ಪಿದರು.
ಇನ್ನು ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ ಎಂದು ನುಡಿದ ವರ್ಷ ಸಿದ್ದರಾಮಯ್ಯ ಸಿಎಂ ಆದ ಉದಾಹರಣೆ ಇದೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮಾಹಿತಿ ನೀಡಿದ್ದಾರೆ.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ (ETV Bharat) ರಾಕ್ಷಸರನ್ನು ಸಂಹರಿಸಿದ್ದ ಶಿವ:"ಈ ಕಾರ್ಣಿಕ ಅಂದರೆ ಏನು ಕಾರ್ಣಿಕೋತ್ಸವ ಯಾವಾಗ ಆರಂಭವಾಯಿತು ಎಂಬುವದರ ಬಗ್ಗೆ ನಿಖರ ಮಾಹಿತಿಯಿಲ್ಲ. ಆದರೆ ತ್ರೇತಾಯುಗದಲ್ಲಿ ಶಿವನು ಮೈಲಾರಲಿಂಗೇಶ್ವರನ ಅವತಾರದಲ್ಲಿ ಬಂದು ಮೈಲಾರದಲ್ಲಿದ್ದ ಮಣಿಕಾಸುರ ಮತ್ತು ಮಲ್ಲಾಸುರ ಎಂಬ ರಾಕ್ಷಸರನ್ನು ಸಂಹರಿಸಿದ. ಅಂದಿನಿಂದ ಶ್ರೀಕ್ಷೇತ್ರದಲ್ಲಿ ಮೈಲಾರಲಿಂಗೇಶ್ವರ ವಾಸಿಸುತ್ತಿದ್ದು, ಶ್ರೀಕ್ಷೇತ್ರದಲ್ಲಿ ಕಾರ್ಣಿಕ ನುಡಿಯುವ ಸಂಪ್ರದಾಯವಿದೆ" ಎನ್ನುತ್ತಾರೆ ಕ್ಷೇತ್ರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ (ETV Bharat) ಕಪಿಲಮುನಿಗಳ ವಂಶಪಾರಂಪರ್ಯ ಇಲ್ಲಿಯ ಧರ್ಮದರ್ಶಿಗಳಾಗಿದ್ದರೆ ಕಾರ್ಣಿಕ ನುಡಿಯುವ ಗೊರವಯ್ಯರದು ಸಹ ವಂಶಪಾರಂಪರ್ಯ ಇದೆ. ಕಪಿಲಮುನಿಗಳು ಈ ಹಿಂದೆ ಆರಿಸಿದ ಗೊರವಯ್ಯ ಸಂತತಿಯೇ ಕಾರ್ಣಿಕ ನುಡಿಯುವುದು ಇಲ್ಲಿಯ ಕಾನೂನು. ಮೈಲಾರದಲ್ಲಿರುವ ವೆಂಕಪ್ಪಯ್ಯ ಒಡೆಯರ್ 18ನೇ ತಲೆಮಾರಿನವರಾಗಿದ್ದು, ಕಾರ್ಣಿಕ ನುಡಿಯುವ ರಾಮಪ್ಪಜ್ಜನದು ಇದೀಗ ಮೂರನೇ ತಲೆಮಾರು.
ಗೊರವಯ್ಯನ ಭವಿಷ್ಯದಿಂದ ನಡೆದಿವೆ ಪ್ರಮುಖ ಐತಿಹಾಸಿಕ ಘಟನೆಗಳು (ETV Bharat) ಡೆಂಕನಮರಡಿಯಲ್ಲಿ 11 ದಿನಗಳ ಕಾಲ ಮೈಲಾರಲಿಂಗೇಶ್ವರ ಮಲ್ಲಾಸುರ ಮತ್ತು ಮಣಿಕಾಸುರರನ್ನು ವಧಿಸುತ್ತಾನೆ. ಅಷ್ಟು ದಿನ ಕಷ್ಟದ ದಿನಗಳನ್ನು ಕಳೆದ ಇಲ್ಲಿಯ ಜನರಿಗೆ ಒಳ್ಳೆಯ ದಿನಗಳು ಆರಂಭವಾದವು. ಈ ದಿನಗಳು ಶುಭನುಡಿಯ ಮೂಲಕ ಆರಂಭವಾಗಲಿ ಎನ್ನುವ ಸಂಪ್ರದಾಯ ಆರಂಭವಾಯಿತು. ಇದೇ ಕಾರ್ಣಿಕವಾಗಿದ್ದು, ಪ್ರತಿವರ್ಷ ಡೆಂಕನಮರಡಿಯಲ್ಲಿ ಭರತ ಹುಣ್ಣಿಮೆಯ ಎರಡನೇಯ ದಿನ ಕಾರ್ಣಿಕ ನುಡಿಯಲಾಗುತ್ತದೆ.
ರಾಜ್ಯ, ನೆರೆ ರಾಜ್ಯಗಳಿಂದ ಆಗಮಿಸುವ ಇತರ ಧರ್ಮಗಳ ಭಕ್ತರು (ETV Bharat) ಕಾರ್ಣಿಕ ನುಡಿಯುವ ಗೊರವಪ್ಪನ ಸಂತತಿ ಇತಿಹಾಸ: ಧರ್ಮದರ್ಶಿ ನೇಮಕವಾದ ವರ್ಷದಲ್ಲಿ ಗೊರವಪ್ಪನ ನೇಮಕವಾಗಿದೆ. ಅವನ ನಂತರ ಅವನ ಹಿರಿಯಮಗ ಕಾರ್ಣಿಕ ನುಡಿಯುವುದು ಇಲ್ಲಿ ನಡೆದುಕೊಂಡು ಬಂದಿದೆ. ಪ್ರಸ್ತುತ ರಾಮಪ್ಪಜ್ಜ ಮೈಲಾರದ ಕಾರ್ಣಿಕ ನುಡಿಯುತ್ತಿದ್ದಾರೆ. ಈ ಹಿಂದೆ ಈತನ ತಂದೆ ಅಣ್ಣ ಕಾರ್ಣಿಕ ನುಡಿದಿದ್ದರು.
ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ (ETV Bharat) ರಾಮಪ್ಪಜ್ಜ ಈ ಕಾರ್ಣಿಕ ನುಡಿಯುವ ಮುನ್ನ 11 ದಿನಗಳ ಕಾಲ ಕಠಿಣ ವೃತ ಮಾಡುತ್ತಾರೆ. ಯಾರ ಜೊತೆ ಮಾತನಾಡುವುದಿಲ್ಲ ದಿನಕ್ಕೆ ಎರಡು ಬಾರಿ ಮಾತ್ರ ಭಕ್ತರಿಗೆ ದರ್ಶನ ನೀಡುತ್ತಾರೆ. ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. 11 ದಿನಗಳ ಕಾಲ ಬಂಡಾರದ ನೀರು ಮತ್ತು ಮೊಸರು ಬಿಟ್ಟು ಬೇರೆ ಏನನ್ನೂ ಸೇವಿಸುವುದಿಲ್ಲ. ಕಾರ್ಣಿಕದ ದಿನ ಡೆಂಕನಮರಡಿಯಲ್ಲಿ ಕ್ಷೇತ್ರದ ಧರ್ಮದರ್ಶಿಗಳ ಆಶೀರ್ವಾದ ಪಡೆಯುವ ಗೊರವಯ್ಯ 18 ಅಡಿ ಬಿಲ್ಲನೇರುತ್ತಾರೆ.
ಕ್ಷೇತ್ರದ ಧರ್ಮದರ್ಶಿಗಳ ಆಶೀರ್ವಾದ ಪಡೆದು 18 ಅಡಿ ಬಿಲ್ಲನೇರುವ ಗೊರವಯ್ಯ (ETV Bharat) ಇವರು ಕಾರ್ಣಿಕ ನುಡಿಯಲು ಆರಂಭಿಸಿ 10 ವರ್ಷ:"ನಮ್ಮಪ್ಪ 28 ವರ್ಷ, ನಮ್ಮಣ್ಣ 25 ವರ್ಷ ಕಾರ್ಣಿಕ ನುಡಿದಿದ್ದರು. ನಾನು ಕಾರ್ಣಿಕ ನುಡಿಯಲು ಆರಂಭಿಸಿ 10 ವರ್ಷವಾಯಿತು ಎಂದು ಗೊರವಪ್ಪ ರಾಮಪ್ಪಜ್ಜ ತಿಳಿಸಿದ್ದಾರೆ.
ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯ (ETV Bharat) "ಆ ಸಂದರ್ಭದಲ್ಲಿ ದೇವರು ನನ್ನ ಬಾಯಿಂದ ಏನು ನುಡಿಸುತ್ತಾನೆ ಅದೇ ಕಾರ್ಣಿಕ. ಈ ವಾಣಿಯನ್ನು ಸ್ವತಃ ಮೈಲಾರಲಿಂಗೇಶ್ವರನೇ ನನ್ನ ಬಾಯಿಯಿಂದ ನುಡಿಸುತ್ತಾನೆ ಎಂಬ ನಂಬಿಕೆ ಇದೆ. ಮೈಲಾರಲಿಂಗೇಶ್ವರ ಭಕ್ತರು ನನಗೆ ಎಲ್ಲಿಲ್ಲದ ಗೌರವ ನೀಡುತ್ತಾರೆ. ಈ ರೀತಿ ವಾಣಿ ನುಡಿಯುವ ಸೇವೆ ದೊರೆತಿರುವುದು ನಮ್ಮ ಮನೆತನಕ್ಕೆ ಸಿಕ್ಕ ದೊಡ್ಡ ಗೌರವ. ಮೈಲಾರಲಿಂಗೇಶ್ವರನ ಕೃಪೆ ನಮ್ಮ ಮೇಲೆ ಯಾವಾಗಲೂ ಇರುತ್ತದೆ. ಅವನ ಆಶೀರ್ವಾದದಿಂದಲೇ ಇದೆಲ್ಲಾ ಸಾಧ್ಯ" ಎನ್ನುತ್ತಾರೆ ಗೊರವಯ್ಯ ರಾಮಪ್ಪಜ್ಜ.
ಗೊರವಪ್ಪ ರಾಮಪ್ಪಜ್ಜ (ETV Bharat) ಇದನ್ನೂ ಓದಿ:'ತುಂಬಿದ ಕೊಡ ತುಳುಕಿತಲೇ ಪರಾಕ್': ಮೈಲಾರದಲ್ಲಿ ಕಾರ್ಣಿಕ ನುಡಿದ ಗೊರವಯ್ಯ
ಇದನ್ನೂ ಓದಿ:ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ಸಕಲ ಸಿದ್ಧತೆ : ಇಲ್ಲಿನ ಗೊರವಯ್ಯ ನುಡಿಯುವ ಭವಿಷ್ಯವಾಣಿಯತ್ತ ಭಕ್ತರ ಚಿತ್ತ