ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ನಿಮಜ್ಜನೆ ನಾಳೆ(ಶನಿವಾರ) ನಡೆಯಲಿದೆ. ಬೆಳಗ್ಗೆ 10.30ಕ್ಕೆ ಶೋಭಾಯಾತ್ರೆ ಆರಂಭವಾಗಲಿದೆ. ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗುವ ಶೋಭಾಯಾತ್ರೆಯು ಅಕ್ಕಮಹಾದೇವಿ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಪಿ.ಬಿ.ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಾಗಲಿದೆ. ನಂತರ ಗಣೇಶಮೂರ್ತಿಯನ್ನು ಬಾತಿ ಕೆರೆಯಲ್ಲಿ ನಿಮಜ್ಜನೆ ಮಾಡಲಾಗುತ್ತದೆ ಎಂದು ಹಿಂದೂ ಮಹಾಗಣಪತಿ ಟ್ರಸ್ಟ್ನ ಅಧ್ಯಕ್ಷ ಜೊಳ್ಳಿಗುರು ತಿಳಿಸಿದರು.
ಶೋಭಾಯಾತ್ರೆಯಲ್ಲಿ ಚೆಂಡೆಮೇಳ, ಡ್ರಮ್ಸೆಟ್ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ. ಮಹಿಳೆಯರಿಗೆ ಪ್ರತ್ಯೇಕ ಡಿಜೆಸಹಿತ ಒಟ್ಟು ಐದು ಡಿಜೆ ಸೆಟ್ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ಮೆರವಣಿಗೆಯ ಪ್ರಯುಕ್ತ ಜಿಲ್ಲಾ ಕೇಂದ್ರದಾದ್ಯಂತ ಕೇಸರಿ ಬಾವುಟ, ಬಂಟಿಂಗ್ಸ್ ಕಟ್ಟಲಾಗಿದೆ.
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬಸವಣ್ಣ, ವಾಲ್ಮೀಕಿ, ಕನಕದಾಸ ಸೇರಿದಂತೆ ಅನೇಕ ದಾರ್ಶನಿಕರ ಪ್ರತಿಕೃತಿಗಳನ್ನು ಹಾಕಲಾಗಿದೆ. ಶೋಭಾಯಾತ್ರೆಯಲ್ಲಿ ಯಾವುದೇ ರಾಜಕಾರಣಿ, ಚಿತ್ರನಟರು ಅಥವಾ ವೈಯಕ್ತಿಕ ಬಾವುಟ, ಬ್ಯಾನರ್ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.