ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಧರಿಸುವ ಕುರಿತಂತೆ ಆದೇಶ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಆರೋಪದಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ನಟ ಚೇತನ್ ಕುಮಾರ್ ಅಹಿಂಸಾ, ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನುರಹಿತ ವಾರಂಟ್ ಅನ್ನು ಹೈಕೋರ್ಟ್ ಇಂದು ಹಿಂಪಡೆಯಿತು.
ಚೇತನ್ ಕುಮಾರ್ ಅಹಿಂಸಾ ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ ತೌಹೀದ್ ಜಮಾತ್ ಅಧ್ಯಕ್ಷ ಆರ್.ರಹಮತುಲ್ಲಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ಗಿರೀಶ್ ಭಾರದ್ವಾಜ್ ದಾಖಲಿಸಿರುವ ಕ್ರಿಮಿನಲ್ ನ್ಯಾಯಾಂಗ ನಿಂದನಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಕೆ.ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ವೇಳೆ ಹಾಜರಿದ್ದ ಚೇತನ್ ಪರ ವಕೀಲರು, 2024ರ ಸೆಪ್ಟೆಂಬರ್ 14ರಂದು ನ್ಯಾಯಾಲಯ ಹೊರಡಿಸಿರುವ ಜಾಮೀನುರಹಿತ ವಾರೆಂಟ್ ಹಿಂಪಡೆಯುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು. ಇದಕ್ಕಾಗಿ ಚೇತನ್‌ಗೆ 5 ಸಾವಿರ ರೂಪಾಯಿ ದಂಡ ವಿಧಿಸಿದ್ದು, ಅದನ್ನು ಹೈಕೋರ್ಟ್ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯ ಘಟಕಕ್ಕೆ ಪಾವತಿಸಬೇಕು. ಅದಕ್ಕೆ ಸಂಬಂಧಿಸಿದಂತೆ ಜ್ಞಾಪನಾ ಪತ್ರ ಸಲ್ಲಿಸಲು ಆದೇಶಿಸಿದೆ.