ಬೆಂಗಳೂರು:ಯುನೆಸ್ಕೋ ಮಾನ್ಯತೆ ಪಡೆದಿರುವ ಪಾರಂಪರಿಕ ಕಪ್ಪತಗುಡ್ಡದ ಅರಣ್ಯ ಪ್ರದೇಶವನ್ನು ಸಂರಕ್ಷಿತ ಮೀಸಲು ಪ್ರದೇಶವೆಂದು ಘೋಷಿಸಿ ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ ೧ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಲ್ಲು, ಮರಳು ಗಣಿಗಾರಿಕೆ ನಿಷೇಧಿಸಿದ್ದ ಹಾಗೂ ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಸರ್ಕಾರದ ಆದೇಶ ಪ್ರಶ್ನಿಸಿ ಎಸ್.ಆರ್. ಬೆಳ್ಳಾರಿ, ಎ.ಜೆ. ಕಳೆರೆ ಹಾಗೂ ಶಿವಗಂಗಾ ಸ್ಟೋನ್ ಕ್ರಷಿಂಗ್ ಇಂಡಸ್ಟ್ರೀಸ್ ಸೇರಿ ಹಲವು ಮೈನಿಂಗ್ ಕಂಪನಿ ಹಾಗೂ ಅವುಗಳ ಮಾಲೀಕರು ಸಲ್ಲಿಸಿದ್ಧ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವೆಂದು ಅಧಿಸೂಚಿಸದೆ ಗಣಿ ಚಟುವಟಿಕೆ ನಿಷೇಧಿಸಿರುವುದು ಕಾನೂನು ಬಾಹಿರ ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ಹೈಕೋರ್ಟ್, ಕಪ್ಪತಗುಡ್ಡ ಮೀಸಲು ಅರಣ್ಯವನ್ನು ವನ್ಯಜೀವಿ ಧಾಮವೆಂದು ಅಧಿಸೂಚಿಸಲಾಗಿದೆ. ಇದರಿಂದ ಅದರ ಸುತ್ತಲಿನ ಒಂದು ಕಿ.ಮೀ. ಪ್ರದೇಶವು ನಿಷೇಧಿತ ವಲಯವಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.
ಜತೆಗೆ, ಪರಿಸರ ಸೂಕ್ಷ್ಮವಲಯ ಅಧಿಸೂಚನೆ ಇಲ್ಲದೆಯೂ ಸಂರಕ್ಷಿತ ಪ್ರದೇಶದಿಂದ ೧ ಕಿ.ಮೀ. ಜಾಗವನ್ನು ಸಂರಕ್ಷಿಸಬೇಕಾಗುತ್ತದೆ ಎಂದೇ ಪರಿಗಣಿಸಬೇಕಿದೆ. ಆದ್ದರಿಂದ, ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಪ್ರಕಟಿಸುವುದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಹೀಗಾಗಿ ಈ ವನ್ಯಜೀವಿ ಧಾಮ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ರಾಷ್ಟ್ರೀಯ ಉದ್ಯಾನ ಅಥವಾ ವನ್ಯ ಜೀವಿಧಾಮಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕ್ವಾರಿ ಘಟಕಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕಪ್ಪತಗುಡ್ಡದ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು 2019ರಲ್ಲಿ ನೋಟಿಫಿಕೇಷನ್ ಹೊರಡಿಸಿರುವುದರಿಂದ ಅದು ಗಣಿಗಾರಿಕೆ ನಿಷೇಧಿತ ವಲಯವೆಂದು ಪರಿಗಣಿಸಬೇಕಿದೆ. ಎಲ್ಲ ಅರ್ಜಿದಾರರ ಕ್ವಾರಿ ಘಟಕಗಳು ಕಪ್ಪತಗುಡ್ಡ ವನ್ಯಜೀವಿಧಾಮದ ಗಡಿಯ ೧ ಕಿ.ಮೀ. ವ್ಯಾಪ್ತಿಯಲ್ಲಿವೆ. ಆದ್ದರಿಂದ ಗಣಿಗಾರಿಕೆಗೆ ಅನುಮತಿಸಲಾಗುವುದಿಲ್ಲ. ಅರ್ಜಿದಾರರ ಗುತ್ತಿಗೆ ಅಮಾನತು/ ಸ್ಥಗಿತಗೊಳಿಸಿರುವುದು ಸೂಕ್ತ ಮತ್ತು ಕಾನೂನು ಬದ್ಧವಾಗಿದೆ ಎಂದು ಪೀಠ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಪಡೆ ಸಮಿತಿ (ಗಣಿ), ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಕಲ್ಲುಕ್ರಷರ್ಗಳ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ 2022ರ ಸೆ.29 ರಂದು ಸಭೆ ನಡೆಸಿ, ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು, 14 ಕ್ವಾರಿ ಗುತ್ತಿಗೆ ಅಮಾನತು ಮಾಡಲು ಮತ್ತು ಯಾವುದಾದರೂ ನಿಯಮ ಉಲ್ಲಂಘಿಸಿದ್ದರೆ ಗುತ್ತಿಗೆ ರದ್ದುಪಡಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿತ್ತು.
ಬಳಿಕ ಕಲ್ಲು ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿ 2022ರ ಡಿ.5 ರಂದು ಗದಗ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಮತ್ತು ಸಕ್ಷಮ ಪ್ರಾಧಿಕಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಕಪ್ಪತಗುಡ್ಡ ವನ್ಯಜೀವಿ ಧಾಮಗಡಿಯ 1 ಕಿ.ಮೀ. ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಕಲ್ಲು, ಮರಳು ಗಣಿಗಾರಿಕೆ ನಡೆಸುತ್ತಿದ್ದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ಬೆಂಗಳೂರು, ಮೈಸೂರಿನ ಪ್ರತಿಷ್ಠಿತ ಬಿಲ್ಡರ್‌ಗಳ ಮನೆ, ಕಚೇರಿಗಳ ಮೇಲೆ ಇಡಿ ದಾಳಿ - ED raids on builders