ಬೆಂಗಳೂರು:ಮಹಿಳೆಯೊಬ್ಬರನ್ನು ಚುಡಾಯಿಸಿದ್ದಲ್ಲದೇ, ಅದನ್ನು ಪ್ರಶ್ನಿಸಿದ ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಮೂರು ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಬೆಸ್ತರಕೊಪ್ಪಲು ಗ್ರಾಮದ ಎಚ್ ಸಿ ಚಿಕ್ಕರಾಜು ಎಂಬುವರು ಅರ್ಜಿ ಸಲ್ಲಿಸಿದ್ದರು, ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ ಆರೋಪಿ ಮಹಿಳೆಯ ಸೀರೆಯನ್ನು ಎಳೆದಿದ್ದು, ಆಕೆಯನ್ನು ಬೆತ್ತಲೆಗೊಳಿಸಲು ಪ್ರಯತ್ನಿಸಿರುವುದು, ಅವರಿಗೆ ಪ್ರಾಣ ಬೆದರಿಕೆ ಹಾಕಿರುವುದು, ಅವರಿಗೆ ದೊಣ್ಣೆಯಿಂದ ಗಾಯಗೊಳಿಸಿರುವುದು. ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವ ಅಂಶಗಳು ಸಾಕ್ಷ್ಯಾಧಾರಗಳಿಂದ ದೃಢ ಪಟ್ಟಿದೆ. ಹೀಗಿರುವಾಗ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯ ನಂಜೇಗೌಡದನ ಕೊಪ್ಪಲು ಗ್ರಾಮದ ನಿವಾಸಿಯಾದ ವಿವಾಹಿತ ಮಹಿಳೆಗೆ ಆರೋಪಿ ಬೆಸ್ತರ ಕೊಪ್ಪಲು ನಿವಾಸಿಯಾದ ಕೆ.ಸಿ ಸಿಕ್ಕರಾಜು ಎಂಬಾತನು ವಿನಾಕಾರಣ ಕಿರುಕುಳ ನೀಡುವುದು, ಅವರು ಎಲ್ಲಿ ಹೋದರೂ ಹಿಂದೆ ಹೋಗುವುದು, ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದನು.
ದೂರುದಾರ ಮಹಿಳೆ ಕೆಲ ದಿನಗಳ ಬಳಿಕ ಈ ವಿಷಯವನ್ನು ಪತಿಯ ಗಮನಕ್ಕೆ ತಂದಿದ್ದರು. 2013ರ ಆಗಸ್ಟ್ 23ರಂದು ದೂರುದಾರ ಮಹಿಳೆ ಮತ್ತು ಆಕೆಯ ಪತಿ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಆರೋಪಿ ಬಂದಿದ್ದನು. ಈ ವೇಳೆ ಮಹಿಳೆಯ ಪತಿ ಈ ಆರೋಪಿ ನಡೆಯನ್ನು ಪ್ರಶ್ನಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ ತಕ್ಷಣ ಮಹಿಳೆ ಮತ್ತವರ ಗಂಡನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನ ಪತ್ನಿಯನ್ನು ಚುಡಾಯಿಸುತ್ತೇನೆ. ಏನು ಮಾಡುತ್ತೀಯಾ? ಎಂದು ಪ್ರಶ್ನೆ ಮಾಡಿದ್ದನು.
ಅಲ್ಲದೇ, ಆರೋಪಿ ದೊಣ್ಣೆಯಿಂದ ಹೊಡೆದು ಎದೆಭಾಗ ಮತ್ತು ಮೊಣಕಾಲಿನ ಮೇಲೆ ಹೊಡೆದು ಗಾಯಗೊಳಿಸಿದ್ದನು. ಪತಿಯ ರಕ್ಷಣೆಗೆ ಬಂದ ಮಹಿಳೆಯ ಸೀರೆಯನ್ನು ಎಳೆದಾಡಿ ಹಲ್ಲೆ ನಡೆಸಿ ಗಂಡನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿದ್ದನು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ವಿರುದ್ಧ ತನಿಖೆ ನಡೆಸಿ ಐಪಿಸಿ ವಿವಿಧ ಕಾಲಂಗಳಡಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಜೆಎಂಎಫ್‌ಸಿ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ಮತ್ತು ಐದು ಸಾವಿರ ದಂಡ ವಿಧಿಸಿ ಆದೇಶಿಸಿತ್ತು. ಇದನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದನು.
ಇದನ್ನೂಓದಿ:ಪ್ರಜ್ವಲ್ ರೇವಣ್ಣ ಪ್ರಕರಣ: ಸ್ವತಂತ್ರ ತನಿಖಾ ಸಂಸ್ಥೆಗೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ - PRAJWAL REVANNA CASE