ಬೆಂಗಳೂರು: ಪ್ರೌಢ ಶಾಲೆಗೆ ನೇಮಕವಾಗಿದ್ದರೂ ಪ್ರಾಥಮಿಕ ಶಾಲೆಗೆ ನಿಯೋಜಿಸಿದ ಕಾರಣ ನೀಡಿ ಕರ್ತವ್ಯಕ್ಕೆ ಗೈರು ಹಾಜರಾದ ದೈಹಿಕ ಶಿಕ್ಷಕನಿಗೆ ವೇತನ ಪಾವತಿ ಮಾಡದ ಶಿಕ್ಷಣ ಇಲಾಖೆಯ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಶಿಕ್ಷಣ ಇಲಾಖೆ ಕ್ರಮವನ್ನು ಎತ್ತಿಹಿಡಿದಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ಕ್ರಮವನ್ನು ದೈಹಿಕ ಶಿಕ್ಷಕ ಎಂ.ಆರ್.ವಾಸುದೇವ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ.ಪಂಡಿತ್ ಮತ್ತು ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ, ಈ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಅರ್ಜಿದಾರರು ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ) ಅಥವಾ ಸಕ್ಷಮ ಪ್ರಾಧಿಕಾರದ ಮುಂದೆ ತನಗೆ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿದ್ದನ್ನು ರದ್ದು ಕೋರಿ ಮನವಿ ಮಾಡಿಲ್ಲ ಅಥವಾ ಮತ್ತೊಂದು ಹುದ್ದೆಯನ್ನೂ ಕೋರಲಿಲ್ಲ. ಜೊತೆಗೆ ಕರ್ತವ್ಯಕ್ಕೂ ಹಾಜರಾಗಿರಲಿಲ್ಲ. ಸಾಕಷ್ಟು ವಿಳಂಬವಾಗಿ ಕೆಎಟಿ ಮುಂದೆ ಪ್ರಶ್ನಿಸಿದ್ದಾರೆ. ಹೀಗಾಗಿ ಅವರು ಕರ್ತವ್ಯದಲ್ಲಿದ್ದರು ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಅವರು ಕೆಲಸಕ್ಕೆ ಗೈರಾದ ಕಾರಣ ಅವರಿಗೆ ವೇತನ ನೀಡದಿರುವ ಇಲಾಖೆಯ ಕ್ರಮ ಸರಿಯಾಗಿದೆ. ಹೀಗಾಗಿ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು 1999ರ ಜುಲೈ 19ರಂದು ಅಮಾನತುಗೊಂಡಿದ್ದರು. ಬಳಿಕ ಅವರ ಮನವಿಯ ಮೇರೆಗೆ 1999ರ ಡಿಸೆಂಬರ್ 4 ರಂದು ಅಮಾನತು ಆದೇಶವನ್ನು ಇಲಾಖೆ ಹಿಂಪಡೆದು, ಹೊಸಕೋಟೆ ತಾಲೂಕಿನ ಕಂಬಳಿಪುರದ ಹಿರಿಯ ಪ್ರಥಮಿಕ ಶಾಲೆಗೆ ನೇಮಕ ಮಾಡಲಾಗಿತ್ತು. ಆದರೆ, ಪ್ರೌಢ ಶಾಲಾ ಶಿಕ್ಷಕರಾಗಿ ನೇಮಕವಾದವರನ್ನು ಪ್ರೌಢ ಶಾಲೆ ಇಲ್ಲವೇ ಪದವಿಪೂರ್ವ ಕಾಲೇಜಿಗೆ ದೈಹಿಕ ಶಿಕ್ಷಕರನ್ನಾಗಿ ನೇಮಕ ಮಾಡಬೇಕಾಗಿತ್ತು. ಬದಲಾಗಿ ಪ್ರಾಥಮಿಕ ಶಾಲೆಗೆ ನಿಯೋಜನೆ ಮಾಡಿದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಅವರ ವೇತನವನ್ನು ಪಾವತಿ ಮಾಡುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದರು.