ಕರ್ನಾಟಕ

karnataka

ಉತ್ತರಾದಿಮಠ, ರಾಘವೇಂದ್ರಸ್ವಾಮಿ ಮಠದ ನವವೃಂದಾವನ ವಿವಾದ: ಜಂಟಿ ಸರ್ವೆ ಆದೇಶ ಅಮಾನತ್ತಿನಲ್ಲಿಟ್ಟ ದ್ವಿಸದಸ್ಯ ಪೀಠ - High Court

By ETV Bharat Karnataka Team

Published : Aug 8, 2024, 9:49 AM IST

ಆನೆಗುಂದಿ ನವವೃಂದಾವನದ ವಿವಾದ ಸಂಬಂಧ ಜಂಟಿ ಸರ್ವೆಗೆ ಹೈಕೋರ್ಟ್​ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದ್ವಿಸದಸ್ಯ ಪೀಠವು ಅಮಾನತ್ತಿನಲ್ಲಿಟ್ಟಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು:ಉತ್ತರಾದಿ ಮಠ ಹಾಗೂ ರಾಘವೇಂದ್ರಸ್ವಾಮಿ ಮಠದ ನಡುವಿನ ಕೊಪ್ಪಳದ ಆನೆಗುಂದಿಯ ನವವೃಂದಾವನದ ಭೂ ಮಾಲಿಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೆ ನಂಬರ್ 192ರ ಒಟ್ಟು ಜಮೀನಿನ ಜಂಟಿ ಸರ್ವೆ ನಡೆಸುವಂತೆ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಅಮಾನತ್ತಿನಲ್ಲಿರಿಸಿದೆ.

ಅಲ್ಲದೇ, ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಸ್ವಾಮೀಜಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಉತ್ತರಾದಿ ಮಠದ ಪರ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ವಾದ ಮಂಡಿಸಿದರು. ವಿನಾಯಕ ಕುಲಕರ್ಣಿ ಹಾಗೂ ಅನಿಲ್ ಕೆಂಭಾವಿ ವಕಾಲತ್ತು ವಹಿಸಿದ್ದರು.

ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿತು. ಅಲ್ಲದೇ, ಕೊಪ್ಪಳ ಜಿಲ್ಲೆ ಆನೆಗುಂದಿಯಲ್ಲಿ ನವವೃಂದಾವನ ಗಡ್ಡೆ ಇರುವ ಸರ್ವೆ ನಂಬರ್ 192ರ ಜಮೀನಿನ ಜಂಟಿಯಾಗಿ ಹೊಸದಾಗಿ ಸರ್ವೆ ನಡೆಸಿ, ಅದರಂತೆ ಕಂದಾಯ ಮತ್ತು ಸರ್ವೆ ದಾಖಲೆಗಳನ್ನು ಸರಿಪಡಿಸುವಂತೆ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಗೆ ನಿರ್ದೇಶನ ನೀಡಿ 2024ರ ಜುಲೈ 3ರಂದು ಏಕಸದಸ್ಯ ಪೀಠ ನೀಡಿದ ಆದೇಶವನ್ನು ಅಮಾನತ್ತಿದೆ. ಜೊತೆಗೆ, ಮುಂದಿನ ವಿಚಾರಣೆವರೆಗೆ ಏಕಸದಸ್ಯ ನ್ಯಾಯಪೀಠದ ಆದೇಶದಂತೆ ಮುಂದುವರೆಯುವಂತಿಲ್ಲ ಎಂದು ಆದೇಶಿಸಿ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಿತು.

ಆನೆಗುಂದಿಯ ಸರ್ವೆ ನಂಬರ್ 192ರಲ್ಲಿ ಒಟ್ಟು 75 ಎಕರೆ ಜಮೀನು ಇತ್ತು. 1916ರಲ್ಲಿ ಉತ್ತರಾದಿ ಮಠವು ಈ ಜಮೀನು ಖರೀದಿಸಿತ್ತು. ಬಳಿಕ ಈ ಜಮೀನಿಗೆ ಸಂಬಂಧಿಸಿದಂತೆ ವ್ಯಾಜ್ಯ ಉಂಟಾಯಿತು. ಕೆಲ ವರ್ಷಗಳ ವ್ಯಾಜ್ಯ ನಡೆದ ನಂತರ ಭೂ ಮಾಲಿಕತ್ವದ ಹಕ್ಕು ಪ್ರತಿಪಾದಿಸಿದ ಉತ್ತರಾದಿ ಮಠ ಜಮೀನ ಕಂದಾಯ ದಾಖಲೆಗಳಲ್ಲಿ ಮಠದ ಹೆಸರು ದಾಖಲಿಸುವಂತೆ ಭೂ ದಾಖಲೆಗಳ ಸಹಾಯಕ ಅಧೀಕ್ಷಕರಿಗೆ ಮನವಿ ಸಲ್ಲಿಸಿತ್ತು.

1974ರ ಏಪ್ರಿಲ್ 18ರಂದು 14 ಎಕರೆ 7 ಗುಂಟೆ ಜಮೀನು ಮರು ಮಂಜೂರು ಮಾಡಲಾಗಿತ್ತು. ಆದರೆ, ಹೆಚ್ಚು ಜಮೀನು ಇದ್ದು, ಸರಿಪಡಿಸುವಂತೆ ಭೂ ದಾಖಲೆಗಳ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಜಮೀನು 27 ಎಕರೆ 30 ಗುಂಟೆ ಆಯಿತು. ಇದನ್ನು ಆಕ್ಷೇಪಿಸಿ ರಾಘವೇಂದ್ರಸ್ವಾಮಿ ಮಠ 2014ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದರ ಸುದೀರ್ಘ ವಿಚಾರಣೆ ನಡೆದು, ಮರು ಸರ್ವೆಗೆ ನ್ಯಾಯಾಲಯ ಆದೇಶಿಸಿತ್ತು. ಆ ಆದೇಶ ಪ್ರಶ್ನಿಸಿ ಉತ್ತರಾದಿಮಠ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ:ಪೊಲೀಸರ ಕಿರುಕುಳದಿಂದ ಕಾಪಾಡಿ ಎಂದು ಕೋರಿದ್ದ ಎಂಜಿನಿಯರ್ ವಿರುದ್ಧವೇ ವಕೀಲರಿಂದ ಆರೋಪ - High Court

ABOUT THE AUTHOR

...view details