ಬೆಂಗಳೂರು :ತಾನು ಪಾಲುದಾರನಾಗಿದ್ದ ಕಂಪನಿಯಲ್ಲಿನ ಉದ್ಯೋಗಿಗಳಿಗೆ ಇಪಿಎಫ್ ಹಣ ಪಾವತಿ ಮಾಡದೆ ವಂಚಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಿರುದ್ಧದ ವಾರೆಂಟ್‌ಗೆ ಹೈಕೋರ್ಟ್ ತಡೆ ನೀಡಿ ಆದೇಶ ಹೊರಡಿಸಿದೆ.
ಆರೋಪ ಸಂಬಂಧ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರು ಹೊರಡಿಸಿರುವ ರಿಕವರಿ ನೋಟಿಸ್ ಮತ್ತು ಬಂಧನ ವಾರೆಂಟ್ ಪ್ರಶ್ನಿಸಿ ರಾಬಿನ್ ಉತ್ತಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ರಾಬಿನ್ ಉತ್ತಪ್ಪ ಅವರು ಸೆಂಚುರೀಸ್ ಲೈಫ್-ಸ್ಟೈಲ್ ಬ್ರ್ಯಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಸಹ ಪಾಲುದಾರರಾಗಿದ್ದರು. ಆದರೆ, 2020ರಲ್ಲಿಯೇ ತಮ್ಮ ಪಾಲುದಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದ್ದರಿಂದ ಅವರನ್ನು ಪ್ರಕರಣದಲ್ಲಿ ಭಾಗಿಯನ್ನಾಗಿಸುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಅವರಿಗೆ ನೀಡಿರುವ ರಿಕವರಿ ನೋಟಿಸ್ ಮತ್ತು ಪುಲಕೇಶಿ ನಗರ ಪೊಲೀಸರು ಹೊರಡಿಸಿರುವ ಬಂಧನ ವಾರೆಂಟ್ ರದ್ದುಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ, ಎಫ್‌ಐಆರ್ ಮತ್ತು ರಿಕವರಿ ನೋಟಿಸ್‌ಗೆ ತಡೆ ನೀಡಿ ಆದೇಶಿಸಿದೆ.