ಕರ್ನಾಟಕ

karnataka

ETV Bharat / state

ಚಾಮರಾಜಪೇಟೆಯಲ್ಲಿದ್ದ ಪಶು ಚಿಕಿತ್ಸಾಲಯ ಸ್ಥಳ ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಕ್ಕೆ ಹೈಕೋರ್ಟ್ ತಡೆ - High Court - HIGH COURT

ಪಶು ವೈದ್ಯಕೀಯ ಚಿಕಿತ್ಸಾಲಯದ ಸ್ಥಳವನ್ನು ಅಲ್ಪಸಂಖ್ಯಾತ ಇಲಾಖೆ ಸುಪರ್ಧಿಗೆ ನೀಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.

high-court
ಚಾಮರಾಜಪೇಟೆಯಲ್ಲಿದ್ದ ಪಶು ಚಿಕಿತ್ಸಾಲಯ ಸ್ಥಳ ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಕ್ಕೆ ಹೈಕೋರ್ಟ್ ತಡೆ (Etv Bharat)

By ETV Bharat Karnataka Team

Published : May 2, 2024, 5:38 PM IST

ಬೆಂಗಳೂರು: ಸುಮಾರು 200 ವರ್ಷಗಳಿಂದ ಬೆಂಗಳೂರು ನಗರದಲ್ಲಿ ಪಶುಗಳಿಗೆ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಚಾಮರಾಜಪೇಟೆಯ ಚಲವಾದಿ ಪಾಳ್ಯದಲ್ಲಿದ್ದ ಪಶು ವೈದ್ಯಕೀಯ ಚಿಕಿತ್ಸಾಲಯವನ್ನು ಅಲ್ಪಸಂಖ್ಯಾತ ಇಲಾಖೆ ಸುಪರ್ಧಿಗೆ ಸ್ಥಳಾಂತರ ಮಾಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ಪ್ರಸಾದ್ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ರಜಾಕಾಲದ ವಿಭಾಗೀಯ ಪೀಠ ನಡೆಸಿತು. ಆದೇಶಕ್ಕೆ ತಡೆ ನೀಡಿದ್ದಲ್ಲದೆ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''1860ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಎಂ.ಮುತೋಜಿರಾವ್ ಶಿಂಧೆ ಎಂಬುವರು ಮಿಂಟೋ ಆಸ್ಪತ್ರೆ, ಅಟ್ಟಾರ ಕಚೇರಿ ದಾನವಾಗಿ ನೀಡಿದ್ದರು. ಇದೇ ಕಾರಣಕ್ಕೆ ಇಂಗ್ಲೆಂಡ್‌ ರಾಣಿ ಎಲಿಜಿಬತ್ ಅವರು ಅತ್ಯಂತ ಬೆಲೆಬಾಳುವ ವಜ್ರದ ಉಂಗುರ ನೀಡಿದ್ದರು. ಅಲ್ಲದೆ, ಬೆಂಗಳೂರಿನ ಪಶುಗಳಿಗೆ ಚಿಕಿತ್ಸಾಲಯ ನಿರ್ಮಾಣಕ್ಕಾಗಿ ಚಾಮರಾಜಪೇಟೆಯಲ್ಲಿನ ಈ ಆಸ್ಪತ್ರೆಯ ಜಾಗವನ್ನು ಮುತೋಜಿರಾವ್ ಅವರೇ ದಾನವಾಗಿ ನೀಡಿದ್ದರು'' ಎಂದು ತಿಳಿಸಿದರು.

''ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಗಳಿಗಾಗಿ ಈ ಆಸ್ಪತ್ರೆ ಇರುವ ಜಾಗವನ್ನು ಪಶು ಸಂಗೋಪನೆ ಇಲಾಖೆಯಿಂದ ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಪಶು ಸಂಗೋಪನೆ ಇಲಾಖೆಯು ಈ ಸ್ಥಳ ಪಶು ಚಿಕಿತ್ಸಾಲಯಕ್ಕೆ ಮಾತ್ರ ಬಳಕೆ ಮಾಡಬೇಕಾಗಿದೆ. ಇತರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ತಿಳಿಸಿ ತಿರಸ್ಕರಿಸಿತ್ತು'' ಎಂದು ಅರ್ಜಿದಾರರ ಪರ ವಕೀಲರು ಮಾಹಿತಿ ನೀಡಿದರು.

''ಅಲ್ಲದೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯರು ಸುಮಾರು 15 ಲಕ್ಷಕ್ಕೂ ಹೆಚ್ಚು ರೂ.ಗಳನ್ನು ಸಂಸದರ ನಿಧಿಯಿಂದ ಮಂಜೂರು ಮಾಡಿ, ಆಸ್ಪತ್ರೆಗೆ ಅಗತ್ಯವಿರುವ ಪರಿಕರಗಳನ್ನು ಕೊಡಿಸಿದ್ದಾರೆ. ಆದರೆ, 2024ರ ಫೆಬ್ರವರಿ 26 ರಂದು ರಾಜ್ಯ ಸರ್ಕಾರ ಈ ಪಶು ಆಸ್ಪತ್ರೆಯನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರ ಮಾಡಿದೆ. ಅಲ್ಲದೆ, ಆಸ್ಪತ್ರೆ ಮತ್ತು ಅಲ್ಲಿಯ ಸಿಬ್ಬಂದಿಯನ್ನು ಜಯನಗರಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಆದೇಶಿಸಿದೆ'' ಎಂದರು.

''ಅಲ್ಲದೆ, ಈ ಸ್ಥಳವನ್ನು ಪಶು ಚಿಕಿತ್ಸೆಗೆ ಮಾತ್ರ ಮೀಸಲಿಡಬೇಕು ಮತ್ತು ಯಾವುದೇ ಇಲಾಖೆಗೆ ಸ್ಥಳಾಂತರ ಮಾಡಬಾರದು ಎಂದು ದಾನ ಮಾಡಿದ್ದ ಮುತೋಜಿರಾವ್ ಶಿಂಧೆ ಅವರ ಮರಿಮೊಮ್ಮಗ ರಾಮಚಂದ್ರ ರಾವ್ ಶಿಂಧೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ದರಿಂದ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು'' ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ಇದನ್ನೂ ಓದಿ:ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ, ಆತ್ಮಹತ್ಯೆ ಮಾಡಿಕೊಂಡಲ್ಲಿ ಮತ್ತೊಬ್ಬರ ಪ್ರಚೋದನೆ ಎನ್ನಲಾಗದು: ಹೈಕೋರ್ಟ್ - High Court

ABOUT THE AUTHOR

...view details