ಬೆಂಗಳೂರು:ವಕ್ಫ್ ವಿಚಾರ ಹಿನ್ನೆಲೆಯಲ್ಲಿ ಹಾವೇರಿಯ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ್ದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಹಾವೇರಿ ಪೊಲೀಸರು ದಾಖಲಿಸಿರುವ ಪ್ರಕರಣದ ಎಫ್‌ಐಆರ್ ಹಾಗೂ ಆನಂತರದ ಪ್ರಕ್ರಿಯೆಗೂ ತಡೆ ನೀಡಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರ ವಾದವೇನು?: ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್, ''ಕರ್ನಾಟಕ ಕಂದಾಯ ಇಲಾಖೆ ಏಕಪಕ್ಷೀಯವಾಗಿ ಭೂ ದಾಖಲೆಗಳನ್ನು ತಿದ್ದಿ, ರೈತರ ಹೆಸರಿನಲ್ಲಿನ ಭೂ ಮಾಲೀಕತ್ವವನ್ನು ವಕ್ಫ್ ಹೆಸರಿಗೆ ಬದಲಾವಣೆ ಮಾಡಿದೆ. ಹಲವು ಜಿಲ್ಲೆಗಳಲ್ಲಿ ಹೀಗೆ ಮಾಡಿರುವುದರಿಂದ ರಾಜ್ಯವ್ಯಾಪಿ ರೈತರು ಭಾರಿ ವಿರೋಧ ವ್ಯಕ್ತಪಡಿಸುತ್ತ ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ, ಸರ್ಕಾರ ಹೆಸರು ಬದಲಾವಣೆ ಅಳಿಸಿ ಹಾಕಿ, ರೈತರಿಗೆ ನೀಡಿದ್ದ ನೋಟಿಸ್‌ಗಳನ್ನು ವಾಪಸ್ ಪಡೆಯುವುದಾಗಿ ಪ್ರಕಟಿಸಿದೆ'' ಎಂದರು.
''ಪ್ರಕರಣದಲ್ಲಿ ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ. ಮೃತ ರೈತನ ತಂದೆಯ ಹೇಳಿಕೆ ಆಧರಿಸಿ ವಕ್ಫ್ ವಿವಾದದ ಹಿನ್ನೆಲೆಯಲ್ಲಿ ಹಾವೇರಿಯ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದ ರೈತರು ನಿಜಕ್ಕೂ ಆತಂಕ ಎದುರಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಆದರೆ ಆ ಬಗ್ಗೆ ಪೊಲೀಸರ ಸ್ಪಷ್ಡನೆ ನಂತರ ಎಕ್ಸ್‌ನಲ್ಲಿ ಪ್ರಕಟಿಸಿದ್ದ ಮಾಹಿತಿ ತೆಗೆದು ಹಾಕಲಾಗಿದೆ. ಹಾಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು'' ಎಂದು ಕೋರಿದರು.