ಬೆಂಗಳೂರು:ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿಯೇ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಎಫ್ಐಆರ್ಗಳಿಗೆ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ತಮ್ಮ ವಿರುದ್ಧ ದಾಖಲಿಸಲಾದ ಎಫ್ಐಆರ್ ರದ್ದು ಕೋರಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ದಿನೇಶ್ ಗುಂಡೂರಾವ್ ಮನಬಂದಂತೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅರ್ಜಿದಾರರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಸಚಿವರ ಪತ್ನಿಯ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. 'ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ' ಎಂದಿದ್ದಾರೆಯೇ ಹೊರತು ಅವರ ಪತ್ನಿ ಪಾಕಿಸ್ತಾನದವರು ಎಂದಿಲ್ಲ. ದೂರುದಾರರು (ಪತ್ನಿ) ತನ್ನನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ಹೇಳಿದ್ದಾರೆ. ಇದು ಅವರ ಊಹೆ. ಇಂತಹ ಹೇಳಿಕೆಯಿಂದ ದಂಪತಿ ಅನುಕಂಪ ಗಳಿಸುವ ಉದ್ದೇಶ ಹೊಂದಿರಬಹುದು. ಆದರೆ ಇದಕ್ಕೆ ಅರ್ಜಿದಾರರು ಯಾವುದೇ ಜವಾಬ್ದಾರರಲ್ಲ ಎಂದು ವಿವರಿಸಿದರು.
ಅಲ್ಲದೆ, ದೂರುದಾರರು ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಪಾಕಿಸ್ತಾನ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮದ ನಡುವೆ ದ್ವೇಷ ಹುಟ್ಟು ಹಾಕುವ ಯಾವುದೇ ಹೇಳಿಕೆಯನ್ನಾಗಲಿ ವರ್ತನೆಯನ್ನಾಗಲಿ ತೋರಲಿಲ್ಲ. ಅಲ್ಲದೆ, ಲೋಕಸಭಾ ಚುನಾವಣಾ ಲಾಭ ಪಡೆಯುವುದಕ್ಕಾಗಿ ಈ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಅರ್ಜಿದಾರರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಹಾಗಾಗಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.